



ಹೆಬ್ರಿ,ಏ.17: ಹಲ್ಲು ಕೂಡ ನಮ್ಮ ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ.ನಮ್ಮ ಹಲ್ಲು ಶುಚಿಯಾಗಿದ್ದಾಗ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ .ಈ ನಿಟ್ಟಿನಲ್ಲಿ ಮಕ್ಕಳು ತಮ್ಮ ಹಲ್ಲುಗಳನ್ನು ಶುಚಿಯಾಗಿ ಇಟ್ಟು ಕೊಂಡಾಗ ಮಾತ್ರ ಆರೋಗ್ಯವಾಗಿರಲು ಸಾಧ್ಯ ಎಂದು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ಬೈಲೂರು ಹೇಳಿದರು .
ಅವರು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಸಹಯೋಗದೊಂದಿಗೆ ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಶಿಬಿರದ ವಿದ್ಯಾರ್ಥಿಗಳಿಗೆ ನಡೆದ ದಂತ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಅರ್ಧಕ್ಕಿಂತ ಹೆಚ್ಚು ರೋಗಗಳು ಅಶುದ್ಧವಾದ ತಿಂಡಿ ತಿನಸುಗಳು, ನೀರು, ಅಥವಾ ಕೊಳಕು ಕೈಗಳಿಂದ ಬಾಯಿಗೆ ಹೋಗುವ ಕ್ರಿಮಿಗಳಿಂದ ಉಂಟಾಗುತ್ತದೆ. ಆಹಾರ ಸೇವನೆ ಮೊದಲು ಕೈಯನ್ನು ಸಾಬೂನಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ಸರಿಯಾಗಿ ಬಾಯಿ, ಒಸಡು, ಹಲ್ಲುಗಳನ್ನು ಶುಚಿಯಾಗಿ ಇಡುವುದರಿಂದ ಹಾಗೂ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಬ್ರಷ್ ಮಾಡುವುದರಿಂದ ಬಾಯಲ್ಲಿ ಉಳಿದಿರುವ ಆಹಾರ ತುಣುಕುಗಳ ಮೇಲೆ ಬ್ಯಾಕ್ಟೀರಿಯಗಳ ಬೆಳವಣಿಗೆಯನ್ನು ತಡೆಯಬಹುದು.ಹಲ್ಲಿನ ಅರೋಗ್ಯ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಹಲ್ಲುಗಳ ಬಗ್ಗೆ ನಿರ್ಲಕ್ಷ್ಯ ಮಾಡುವುದರಿಂದ ಹಲವು ಸಮಸ್ಯೆಗಳು ಉದ್ಭವಿಸಬಹುದು ಎಂದರು.
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಚಾರ ವಾದಿರಾಜ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಶಾಲೆಯಲ್ಲಿ ನಾಲ್ಕು ಗೋಡೆಗಳ ಮದ್ಯ ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕ ಗಳಿಸಿದರೂ ಹೊರಗಿನ ಪರಿಸರದಲ್ಲಿ ಮಕ್ಕಳು ರಜಾದಿನಗಳ್ಳಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಅರೋಗ್ಯ ಮಾಹಿತಿ ಪಡಕೊಳ್ಳುತ್ತಿರುವುದು ಮಕ್ಕಳ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಕೈತೊಳೆಯುವಿಧಾನವನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು. ಸಮಾರಂಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅರೋಗ್ಯ ನಿರೀಕ್ಷಕ ಚಿದಾನಂದ ಸ್ವಾಮಿ,ಕುಚ್ಚೂರು ಹೆರ್ಗ ವಿಟ ಲ್ ಶೆಟ್ಟಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ,ಶಿಬಿರದ ಸಂಪನ್ಮೂಲ ವ್ಯಕ್ತಿ ವಿಜೇತ ಶೆಟ್ಟಿ, ಅಮೃತ ಭಾರತಿ ಶಿಕ್ಷಣ ಸಂಸ್ಥೆಯ ವಿಜ್ಞಾನ ಶಿಕ್ಷಕಿ ರಜನಿ, ಚಾಣಕ್ಯ ಎಜುಕೇಶನಲ್ ಮತ್ತು ಕಲ್ಚರಲ್ ಅಕಾಡೆಮಿಯ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ,ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಬಾಲಚಂದ್ರ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು. ಮುದ್ರಾಡಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ಬಲ್ಲಾಡಿ ಚಂದ್ರ ಶೇಖರ್ ಭಟ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.