



ಹೆಬ್ರಿ: ಶಿಕ್ಷಣವು ಕೇವಲ ಜೀವನೋಪಾಯಕ್ಕೆ ಬೇಕಾದ ಜ್ಞಾನವನ್ನು ನೀಡುವುದಲ್ಲದೆ, ಜೀವನ ಶಿಕ್ಷಣವನ್ನು ನೀಡಬೇಕು. ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುವಂತೆ, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಖಲಿಫಾ ಯುನಿವರ್ಸಿಟಿ ಯುಎಇ, ಅಸಿಸ್ಟೆಂಟ್ ಪ್ರೊಫೆಸರ್ ಡಾ. ದಿನೇಶ್ ಶೆಟ್ಟಿ ಕರ್ಕಿ ಹೇಳಿದ್ದಾರೆ.
ಇವರು ಹೆಬ್ರಿಯ ಎಸ್.ಆರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳ ಮೇಲೆ ಅತಿಯಾದ ಒತ್ತಡವಿರುವುದು ನಿಜ. ಶಿಕ್ಷಣದ ಮೂಲ ಉದ್ದೇಶ ಬರೀ ಅಂಕಗಳಿಸುವುದು ಮಾತ್ರ ಆಗಬಾರದು. ನಾವು ಸಂತೋಷವಾಗಿ, ಆರೋಗ್ಯಕರವಾಗಿ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಜೀವನವನ್ನು ನಡೆಸಬೇಕು. ಇದಕ್ಕೆ ಶಿಕ್ಷಣವು ನಮಗೆ ಮಾರ್ಗದರ್ಶನ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾಗರಾಜ್ ಶೆಟ್ಟಿ ಮಾತನಾಡಿ, ನಾವು ಯೋಗ್ಯ ಶಿಕ್ಷಣವನ್ನು ಪಡೆದು ಉನ್ನತ ಸ್ಥಾನಕ್ಕೆ ಏರಿದ ಮೇಲೆ ಸಮಾಜಕ್ಕೆ ನಾವು ಕೊಡುಗೆಯನ್ನು ನೀಡಬೇಕು ಆ ಮೂಲಕ ಸಾಮೂಹಿಕ ಅಭಿವೃದ್ಧಿ ಸಾಧಿಸುವ ಕೆಲಸ ಯುವ ಪೀಳಿಗೆಯಿಂದ ಸಾಧ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಶಂಕರ್, ಪ್ರದೀಪ್ ಶೆಟ್ಟಿ, ಎಸ್.ಆರ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಅಮೃತ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.