



ಕಾರ್ಕಳ : ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಗೂ ಗ್ಯಾಸ್ಟ್ರೊ ಎಂಟಿರೋಲಜಿ ಮತ್ತು ಹೆಪಟಾಲಜಿ ವಿಭಾಗ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ಹೆಪಟೈಟಿಸ್ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ಹೆಪಟೈಟಿಸ್ ತಪಾಸಣ ಶಿಬಿರವನ್ನು ಆ.2ರಂದು ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಉಪ ವೈದ್ಯಕೀಯ ಅಧೀಕ್ಷಕ ಹಾಗೂ ಗಾಸ್ಟ್ರೋಎಂಟರಾಲಜಿ ವಿಭಾಗ ಮುಖ್ಯಸ್ಥರಾದ ಡಾ ಶಿರನ್ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಹೆಪಟೈಟಿಸ್ ಬಗ್ಗೆ ಮಾಹಿತಿ ನೀಡಿ, ಸಾರ್ವಜನಿಕರು ತಪಾಸಣೆಗೆ ಒಳಪಟ್ಟು, ಕಾಯಿಲೆ ಇಲ್ಲದವರು ಲಸಿಕೆ ಹಾಕಿಸಿ ಕಾಯಿಲೆ ಬರದಂತೆ ತಡೆಯಲುಸಾಧ್ಯ ಹಾಗೂ ಕಾಯಿಲೆ ಇದ್ದಲ್ಲಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಇದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೋಟರಿ ಸಂಸ್ಥೆಯ ಮಾಜಿ ರಾಜ್ಯಪಾಲ ಪಿ ಡಿ ಜಿ ಡಾ ಭರತೇಶ್ ಅವರು, ಮಾನವನ ಅಂಗದಲ್ಲಿ ಯಕೃತ್ ನ ಮಹತ್ವ ಮತ್ತು ಅದರ ಆರೋಗ್ಯದ ಕುರಿತು ಮಾತನಾಡಿದರು . ವೇದಿಕೆಯಲ್ಲಿ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ್ ಬಳ್ಳಾಲ ಅವರು ಉಪಸ್ಥಿತರಿದ್ದರು. ಅವರು ಮಾತನಾಡುತ್ತಾ, ಉಚಿತ ಹೆಪಟೈಟಿಸ್ ತಪಾಸಣಾ ಶಿಬಿರವನ್ನು 2ನೇ ಆಗಸ್ಟ್ 23ರಿಂದ 5ನೇ ಆಗಸ್ಟ್ 23ವರೆಗೆ ಆಸ್ಪತ್ರೆಯಲ್ಲಿ ಬೆಳಿಗ್ಗೆ 9.30ರಿಂದ ಸಾಯಂಕಾಲ 4.30ರ ವರೆಗೆ ನಡೆಸುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷ ಸುರೇಶ್ ನಾಯಕ್ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಕುಮಾರಿ ಅನುಷಾ ಪ್ರಭು ನಿರೂಪಿಸಿ, ಆಶ್ಲೋನ್ ಅವರು ಧನ್ಯವಾದವಿತ್ತರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.