



++++++++++++++++++++++++++ ಸ್ನೇಹಿತರು ನಮ್ಮ ಬದುಕಿನ ಅವಿಭಾಜ್ಯ ಅಂಗ. ಆದರೆ ಒಳ್ಳೆ ಫ್ರೆಂಡ್ ಸಿಗೋದು ಕಷ್ಟ. ಇಂಥ ಹೊತ್ತಲ್ಲಿ ಮನಸೆಂಬ ಫ್ರೆಂಡ್ ಹೆಚ್ಚು ಆಪ್ತನಾಗಬಲ್ಲ. ++++++++++++++++++++++++++
ನಿಮ್ಮ ಫ್ರೆಂಡ್ ಯಾರು ಅಂತ ಕೇಳಿದ್ರೆ ನಾವು ಹಲವರ ಹೆಸರು ಹೇಳ್ತೇವೆ. ಬಾಲ್ಯದಿಂದ ಹಿಡಿದು ಬದುಕಿನ ಈ ಕ್ಷಣದ ವರೆಗೆ ಹಲವರು ಬಂದು ಹೋಗಿರ್ತಾರೆ. ಇನ್ನು ಕೆಲವರಿಗೆ ಸ್ನೇಹಿತರೇ ಇಲ್ಲ ಎಂಬ ಬೇಸರ.
ಸ್ನೇಹಿತರು ಒಳ್ಳೆಯವರಿರಬೇಕು ಎನ್ನುವುದು ಎಲ್ಲರ ಬಯಕೆಯಾದರೂ ಕೆಲವೊಮ್ಮೆ ದಿಕ್ಕು ತಪ್ಪಿಸುವವರೂ ಇರ್ತಾರೆ. ನಮ್ಮ ಬೆಸ್ಟ್ ಫ್ರೆಂಡ್ ಅಂದ್ರೆ ನಮ್ಮ ಸಂತೋಷದಲ್ಲಿ ಸಂಭ್ರಮಿಸುವವನಾಗಿರಬೇಕು, ಕಷ್ಟ ಕಾಲದಲ್ಲಿ ಅನ್ನೋದು ಎಲ್ಲರ ಬಯಕೆ. ಅಂದರೆ ನಮ್ಮನ್ನು ಅರ್ಥ ಮಾಡಿಕೊಳ್ಳುವವನು, ನಮ್ಮ ಮಾತಿಗೆ ಸ್ಪಂದಿಸುವವನು, ನಮ್ಮ ಏಳಿಗೆಗೆ ಸಹಾಯ ಮಾಡೋನು ಫ್ರೆಂಡ್.
ನಾವು ಬಯಸೋ ಎಲ್ಲ ಗುಣಗಳು ಒಬ್ಬನಲ್ಲೇ ಇರೋದು ತುಂಬ ಕಷ್ಟಾನೆ. ಹಾಗಂತ ಒಂದೊಂದಕ್ಕೆ ಒಬ್ಬೊಬ್ಬ ಫ್ರೆಂಡ್ ಅಂತ ಮಾಡಿಕೊಂಡರೆ ಅದು ಸ್ನೇಹ ಹೋಗಿ ವ್ಯಾಪಾರ ಆಗಲ್ವಾ?
ಹಾಗಿದ್ರೆ ಮಾಡೋದೇನು?
ನಾವು ಹೆಚ್ಚಿನ ಸಂದರ್ಭದಲ್ಲಿ ಮಾತು ಕೇಳೋದು ನಮ್ಮ ಮನಸಿನದ್ದು. ಯಾರೇನೇ ಅಂದ್ರೂ ಅಲ್ಟಿಮೇಟ್ ನಿರ್ಧಾರ ತಗೋಳೋದು ಮನಸೆ. ಅದು ಒಳ್ಳೆಯದೋ ಕೆಟ್ಟದೋ ಎರಡರ ಮೂಲವೂ ಅದೇ.
ಹಾಗಿದ್ದರೆ ಮನಸನ್ನೇ ನಮ್ಮ ಬೆಸ್ಟ್ ಫ್ರೆಂಡ್ ಮಾಡಿಕೊಂಡರೆ ಹೇಗೆ? ಮನಸೇ ಬೆಸ್ಟ್ ಫ್ರೆಂಡ್ ಆಗಿದ್ದರೆ ತುಂಬ ಅನುಕೂಲಗಳಿವೆ. ಯಾರದೋ ಮುಂದೆ ನಿಮ್ಮ ಕತೆ ಹೇಳ್ಕೊಬೇಕಿಲ್ಲ. ಅವರ ಯೋಚನೆಗಳಿಗೆ ನಾವು ಮೌಲ್ಡ್ ಆಗಬೇಕಿಲ್ಲ. ಅವರ ಮರ್ಜಿಗೆ ಕಾಯಬೇಕಿಲ್ಲ. ಫ್ರೆಂಡ್ಸಿಲ್ಲ ಅಂತ ಬೇಜಾರಾಗ್ಬೇಕಿಲ್ಲ. ಫ್ರೆಂಡ್ಸ್ ಒಳ್ಳೆ ಟೈಮಲ್ಲಿ ಕೈಕೊಟ್ರು ಅಂತ ಮನಸು ಮುದುಡಿಸಬೇಕಿಲ್ಲ.
ಫ್ರೆಂಡ್ ಶಿಪ್ ಮಾಡೋದು ಸುಲಭ
ನಿಜವೆಂದರೆ ನಮಗೆ ಮನಸಿನೊಂದಿಗೆ ಸ್ನೇಹ ಮಾಡೋದು ಸುಲಭ. ಮತ್ತು ವ್ಯವಸ್ಥಿತವಾಗಿಯೂ ಮಾಡಬಹುದು.
ನಾವು ನಮ್ಮ ಕನಸುಗಳನ್ನು ಫ್ರೆಂಡ್ಸ್ ಜತೆ ಹಂಚಿಕೊಳ್ತೀವಲ್ವಾ? ಅದೇ ರೀತಿ ಮನಸಿನ ಜತೆನೂ ಹಂಚಿಕೊಳ್ಳಬಹುದು. ಅಂದ್ರೆ ನಾವು ನಮ್ಮ ಪ್ಲ್ಯಾನಿಂಗ್, ಏನು ಕನಸುಗಳಿವೆ ಅನ್ನೋದನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ತಾ ಇದ್ರೆ ಅದೇ ಮನಸಿನ ಜತೆಗೆ ಹೇಳಿಕೊಳ್ಳೋದು.
ನಾವು ಬದುಕಿನಲ್ಲಿ ಏನಾಗ್ಬೇಕು ಅಂತ ಮನಸಿಗೆ ಸರಿಯಾಗಿ ಹೇಳಿದ್ರೆ ಅದಕ್ಕೆ ಬೇಕಾದ ದಾರಿಗಳನ್ನು ಅದೇ ತೋರಿಸ್ತಾ ಹೋಗ್ತದೆ ಅಂತ ಕೇಳಿದೇವೆ. ಸಣ್ಣ ಉದಾಹರಣೆ ಎಂದರೆ, ಬೆಳಗ್ಗೆ 5 ಗಂಟೆಗೆ ಏಳ್ಬೇಕು ಅಂತ ಮನಸಿಗೆ ಗಟ್ಟಿಗೊಳಿಸಿ ಮಲಗಿದ್ರೆ ಯಾವ ಅಲರಾಂ ಕೂಡಾ ಇಲ್ಲದೆ 4:59ಕ್ಕೆ ಎಚ್ಚರ ಆಗಿರ್ತದಲ್ವಾ? ಹಾಗೆ.
ನಾವು ಗೆಳೆಯರ ಜತೆ ಮಾತಾಡ್ವಾಗ ಎಲ್ಲ ವಿಚಾರಗಳನ್ನು ಹೇಳಿ ಅಭಿಪ್ರಾಯ ಕೇಳ್ತೇವೆ. ಇಲ್ಲೂ ಅಂತ ಆಪ್ಶನ್ ಇದ್ದೇ ಇದೆ. ಇಲ್ಲಿನ ಅನುಕೂಲ ಎಂದರೆ ನಾವು ಅದದೇ ವಿಚಾರಗಳನ್ನು ಮತ್ತೆ ಮತ್ತೆ ಫೀಡ್ ಮಾಡಬೇಕಿಲ್ಲ. ಅದಾಗಿಯೇ ರಿಕಾಲ್ ಆಗ್ತಾ ಇರ್ತದೆ.
ನಾವು ಹೆಚ್ಚಿನ ಸಂದರ್ಭದಲ್ಲಿ ಫೇಲ್ ಆಗೋದಕ್ಕೆ ಕಾರಣ ಏನು ಮಾಡಬೇಕು ಅಂತ ಸರಿಯಾದ ತೀರ್ಮಾನ ಮಾಡದೆ ಇರುವುದು ಮತ್ತು ನಮ್ಮ ಯೋಚನೆಗಳನ್ನು ಗಟ್ಟಿಗೊಳಿಸದೆ ಇರುವುದು. ವ್ಯಕ್ತಿತ್ವ ವಿಕಸನದಲ್ಲಿ ಒಂದು ಮಾತು ಬರ್ತದೆ.. ನೀವೇನಾದರೂ ತೀರ್ಮಾನ ಮಾಡಿದ್ರೆ ಅದನ್ನು ನಾಲ್ಕು ಮಂದಿಯಲ್ಲಿ ಹೇಳಿ.. ಆಗ ಅದು ಗಟ್ಟಿ ಆಗ್ತದೆ ಅಂತ. ನಿಜವೆಂದರೆ ಯಾರಲ್ಲೋ ಹೇಳುವುದಕ್ಕಿಂತ ನಮ್ಮ ಮನಸಿಗೇ ಅದನ್ನು ಮತ್ತೆ ಮತ್ತೆ ಹೇಳ್ತಾ ಇದ್ರೆ ಸಾಕಾಗ್ತದೆ. ಫೈನಲಿ ಕೆಲಸ ಮಾಡಬೇಕಿರುವುದು ಮನಸೇ ಅಲ್ವಾ?
ನಾವು ಅತಿ ಹೆಚ್ಚು ಟೈಮ್ ಕಳೆಯೋದು ಯಾರ ಜತೆಗೆ ಅಂದ್ರೆ ಫ್ರೆಂಡ್ಸ್ ಜತೆಗೆ ಅಂತಾರೆ ಕೆಲವರು. ನಿಜ ಅಂದ್ರೆ ನಾವು ಹೆಚ್ಚು ಸಮಯ ಕಳೆಯಬೇಕಿರುವುದು ನಮ್ಮ ಬದುಕನ್ನು ಪೊರೆಯುವ ಮನಸಿನ ಜತೆಗೆ. ಅದಕೇ ಹೇಳುವುದು ಅದನ್ನೇ ಫ್ರೆಂಡ್ ಮಾಡಿಕೊಳ್ಳಬೇಕು ಅಂತ.
ಸ್ನೇಹಿತರ ಭೇಟಿ ಸಂದರ್ಭದಲ್ಲಿ ಹೆಚ್ಚು ಚರ್ಚೆ ಆಗೋದು ಏನು ಹೊಸ ವಿಷ್ಯ ಅಂತ? ನಾವು ನಮ್ಮ ಮನಸಿಗೂ ಅದೇ ಪ್ರಶ್ನೆಯನ್ನು ಆಗಾಗ ಕೇಳ್ತಾ ಇರಬೇಕು. ಆಗ ಅದೇ ಯೋಚನೆ ಮಾಡಿ ನಮ್ಗೆ ಹೇಳ್ತದೆ. ಅಥವಾ ಪೆಂಡಿಂಗ್ ಪ್ರಾಜೆಕ್ಟ್ ಗಳ ಬಗ್ಗೆ ಎಚ್ಚರಿಕೆ ಕೊಡ್ತಾ ಇರ್ತದೆ.
ಮನಸು ನಮ್ಮ ಯೋಚನೆಗಳನ್ನು ಬೇರೆ ಬೇರೆ ಹಂತಗಳಲ್ಲಿ ಸೇವ್ ಮಾಡಿಕೊಂಡಿರ್ತದೆ. ಒಮ್ಮೆ ಸುಪ್ತ ಮನಸಿಗೆ ಹೋಯಿತೆಂದರೆ ಅದೊಂದು ತರ ಸರ್ಚ್ ಎಂಜಿನ್ ತರ ಅದಕ್ಕೆ ಹೊಂದಿಕೊಳ್ಳುವ ಸಂಗತಿಗಳನ್ನು ಹುಡುಕುತ್ತಾ ಹೋಗ್ತದೆ. ಅಂದ್ರೆ ನಮ್ಮ ಫ್ರೆಂಡ್ ತರ ಫೀಡ್ ಬ್ಯಾಕ್ ಕೊಡ್ತಾ ಹೋಗ್ತದೆ.
ಮನಸೆಂಬ ಫ್ರೆಂಡ್ ಗಾಗಿ ನಾವು ಮಾಡಬೇಕಾದ ಒಂದೇ ಕೆಲಸವೆಂದರೆ ನಮಗೇನು ಬೇಕು ಅನ್ನೋದನ್ನು ಆಗಾಗ ನೆನಪು ಮಾಡ್ತಾ ಇರಬೇಕು ಅಷ್ಟೆ. ನಕಾರಾತ್ಮಕ ಯೋಚನೆಗಳು ಬಂದಾಗ ಮನಸಿನ ಮೊರೆ ಹೋಗಬಹುದು. ಆದರೆ ಮನಸಿಗೇ ನಕಾರಾತ್ಮಕ ಯೋಚನೆ ತುಂಬೋದು ತರವಲ್ಲ.
ಹೀಗೆ ಮನಸನ್ನು ಪಳಗಿಸಿ ಫ್ರೆಂಡ್ ಮಾಡ್ಕೊಂಡ್ರೆ ಎಲ್ಲ ಸಮಸ್ಯೆಗಳಿಗೆ ಉತ್ತರ ಸಿಕ್ಕೀತು.
---ಕೃಷ್ಣ ಭಟ್ ಅಳದಂಗಡಿ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.