



ಉಡುಪಿ:
ಇನ್ನು ಹದಿನೈದು ದಿನ ಗಡುವು ಕೊಡುತ್ತೇವೆ ಅಷ್ಟರೊಳಗೆ ರಸ್ತೆ ಸರಿಪಡಿಸದಿದ್ದರೆ ಪರ್ಕಳ ರಸ್ತೆಯಲ್ಲೇ ಒಲಿಂಪಿಕ್ಸ್ ಹಮ್ಮಿಕೊಳ್ಳುತ್ತೇವೆ. ಕಂಬಳ, ಕೆಸರು ರಸ್ತೆ ಓಟ ಸಹಿತ ವಿವಿಧ ಆಟಗಳನ್ನು ಆಯೋಜಿಸುತ್ತೇವೆ. ಓಟು ಹಾಕಿದ ನಮಗೆ ಸುಸಜ್ಜಿತ ರಸ್ತೆ ಪಡೆಯುವ ಹಕ್ಕು ಇದೆ ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು ಅವರು ಭಾನುವಾರ ಪರ್ಕಳದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ನಡೆದ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದರು. ಪರ್ಕಳದಲ್ಲಿ ಕಚಡಾ ರಸ್ತೆಯನ್ನು ನೀಡುವ ಮೂಲಕ ಸರಕಾರವೇ ರಸ್ತೆ ತಡೆ ಮಾಡುವ ಪರಿಸ್ಥಿತಿ ಉದ್ಭವಿಸಿದೆ. ಸರಕಾರ ಮತ್ತು ಅಧಿಕಾರಿಗಳು ರಸ್ತೆ ಅಗಲಿಕರಣ ಎಂಬ ನೆಪದಲ್ಲಿ ಸಾರ್ವಜನಿಕರ ಜೀವ ತಿನ್ನುವ ಕೆಲಸ ಮಾಡುತ್ತಿದ್ದಾರೆ. ಮೇ 2021 ರ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳ‍್ಳುವುದಾಗಿ ಉಡುಪಿಯ ಶಾಸಕರು ಮಾಧ್ಯಮ ಹೇಳಿಕೆ ನೀಡಿದ್ದರು. ಆದರೆ ಇವತ್ತಿನ ತನಕ ಅದು ಪೂರ್ಣಗೊಂಡಿಲ್ಲ ಎಂದರು. ಇತ್ತೀಚೆಗೆ ಆಧ್ಯಯನಕ್ಕಾಗಿ ಶಾಸಕರೆಲ್ಲ ಲೇಹ್ ಲಡಾಕ್ ಗೆ ಹೋಗಿದ್ದಾರೆ. ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ, ನಮ್ಮ ಪರ್ಕಳ ರಸ್ತೆಗೆ ಬಂದರೆ ಸಾಕು. ನಿಮಗೆ ಇಲ್ಲಿಯೇ ಲೇಹ್ ಲಡಾಕ್ ನ ಅನುಭವವಾಗುತ್ತದೆ. ನಿಮಗೆಲ್ಲ 25 ಲಕ್ಷದ ಕಾರಿರಬಹುದು,ಬಡವರಿಗೆ ಅದ್ಯಾವುದೂ ಇಲ್ಲ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಸಮಾನಮನಸ್ಕರು ಮತ್ತು ಪರ್ಕಳ ನಿವಾಸಿಗಳು ಪಾಲ್ಗೊಂಡಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.