



ಶಿವಮೊಗ್ಗ: ಏಳನೇ ವೇತನ ಆಯೋಗದ ಮಧ್ಯಂತರ ವರದಿ ಅನುಷ್ಠಾನ ಕುರಿತು ಸರ್ಕಾರಿ ಆದೇಶ ಹೊರಡಿಸಿದರೆ ಮಾತ್ರ ಈಗಾಗಲೇ ಕರೆನೀಡಿರುವ ಮುಷ್ಕರ ವಾಪಸ್ ಪಡೆಯಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು.
ಸರ್ಕಾರಿ ನೌಕರರ ಸಂಘದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನಿಂದಲೂ 7ನೇ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡುವಂತೆ ಒತ್ತಾಯಿಸುತ್ತಲೇ ಬರಲಾಗಿದೆ. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇತ್ತಾದರೂ ಅದು ಹುಸಿಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಮಾರ್ಚ್ 1ರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರಿ ನೌಕರರು ಅನಿರ್ದಿಷ್ಟಾವ ಮುಷ್ಕರ ನಡೆಸಲಿದ್ದಾರೆ ಎಂದರು.
ಎರಡು ಪ್ರಮುಖ ಬೇಡಿಕೆಗಳನ್ನು ಈಗಾಗಲೇ ಸರ್ಕಾರದ ಮುಂದೆ ಇಡಲಾಗಿದೆ. 1-7-2022ರಿಂದ ಜಾರಿಗೆ ಬರುವಂತೆ ಶೇ.40ರಷ್ಟು ವೇತನ ಹೆಚ್ಚಳ ಸೌಲಭ್ಯ ಒದಗಿಸಬೇಕು.ಎನ್‌ಪಿಎಸ್ ರದ್ದು ಮಾಡಿ, ಓಪಿಎಸ್ ಜಾರಿಗೆ ತರಬೇಕು. ಈ ಸೌಲಭ್ಯದ ಬಗ್ಗೆ ಸರ್ಕಾರದ ಆದೇಶ ಹೊರಡಿಸಬೇಕು ಎಂದು ಷಡಕ್ಷರಿ ಆಗ್ರಹಿಸಿದರು.
ಈಗಾಗಲೇ ಫೆಬ್ರವರಿ 21ರಂದು ಬೆಂಗಳೂರಿನಲ್ಲಿ 200 ವೃಂದ ಸಂಘಗಳು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರ ಸಂಘಟನೆಗಳ 5000ಕ್ಕೂ ಹೆಚ್ಚು ಪ್ರತಿನಿಗಳು ಸೇರಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸರ್ವಸಮ್ಮತವಾಗಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಗ್ರಾಮ ಪಂಚಾಯ್ತಿಯಿಂದ ಹಿಡಿದು ವಿಧಾನಸೌದದವರೆಗೆ ಎಲ್ಲಾ ಸೇವೆಗಳಿಗೂ ಗೈರು ಹಾಜರಾಗಲಿದ್ದಾರೆ. ಶಿಕ್ಷಣ ಕ್ಷೇತ್ರದ ಸೇವೆಗಳೂ ಲಭ್ಯ ಇರುವುದಿಲ್ಲ ಎಂದು ತಿಳಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.