



ಉಡುಪಿ : ಸಣ್ಣ ಮಕ್ಕಳಲ್ಲಿ ಅತಿಸಾರ ಬೇಧಿ ಉಂಟಾದಲ್ಲಿ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸುವುದರಿಂದ ಮಕ್ಕಳು ಉತ್ತಮ ಆರೋಗ್ಯದಿಂದಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಜಿಲ್ಲಾ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ವತಿಯಿಂದ ನಡೆದ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ, ನವಜಾತ ಶಿಶುವಾರ ಹಾಗೂ ನ್ಯೂಮೋನಿಯಾವನ್ನು ಕೊನೆಗೊಳಿಸುವಲ್ಲಿ ಸಾಮಾಜಿಕ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅತಿಸಾರ ಬೇಧಿ ಹಿನ್ನೆಲೆ, ಮಕ್ಕಳ ಸಾವಿಗಳು ಹೆಚ್ಚು ಆಗುತ್ತಿವೆ. ಇದನ್ನು ತಪ್ಪಿಸಲು ಸರ್ಕಾರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಕಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡುವುದರ ಜೊತೆಗೆ ಆ ಸಂದರ್ಭದಲ್ಲಿ ಜನರು ಏನೆಲ್ಲಾ ಕ್ರಮ ಕೈಗೊಳ್ಳಬೇಕೆಂಬ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತಿದೆ ಎಂದರು.
ನವಜಾತ ಶಿಶುಗಳಿಗೆ ತಾಯಂದಿರು ತಪ್ಪದೇ ಎದೆ ಹಾಲನ್ನು ಕುಡಿಸಬೇಕು. ಇದರಿಂದಾಗಿ ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಇದರ ಜೊತೆಯಲ್ಲಿ ಆರು ತಿಂಗಳ ನಂತರ ಪೌಷ್ಠಿಕ ಆಹಾರ ನೀಡಿದ್ದಲ್ಲಿ ಮಕ್ಕಳು ಸದೃಢರಾಗಿ ಬೆಳೆಯಲು ಸಹಕಾರಿಯಾಗುವುದರ ಜೊತೆಗೆ ಸಮಾಜದಲ್ಲಿ ಆರೋಗ್ಯ ಸುಧಾರಣೆ ಆಗುತ್ತದೆ ಎಂದರು. ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಲ್ಲಿ ಮಾತ್ರ ಜನರು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದ ಅವರು, ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ, ನ್ಯಮೂನೋನಿಯಾ ತಡೆಗಟ್ಟುವಿಕೆ ಸೇರಿದಂತೆ ಮತ್ತಿತರ ಆರೋಗ್ಯ ಸೇವೆಗಳನ್ನು ಸಮುದಾಯದ ಸಹಭಾಗಿತ್ವದಲ್ಲಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಪ್ರಭಾರ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರ್.ಎಮ್.ಓ ಡಾ.ವಾಸುದೇವ, ಡಾ.ವೇಣುಗೋಪಾಲ್, ಡಾ.ರಾಜಗೋಪಾಲ ಭಂಡಾರಿ, ಡಾ.ಮಹಾದೇವ ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಸಿಬ್ಬಂದಿಗಳು, ತಾಯಂದಿರು, ಮಕ್ಕಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಸ್ವಾಗತಿಸಿದರು. ಡಾ.ವೇಣುಗೋಪಾಲ್ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.