logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮೂರು ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಅಗತ್ಯವಿರುವ ಕಾಲುಸಂಕ ನಿರ್ಮಾಣ ಕಾಮಗಾರಿ ಪೂರ್ಣ : ಸಚಿವ ಸತೀಶ್ ಜಾರಕಿಹೊಳಿ

ಟ್ರೆಂಡಿಂಗ್
share whatsappshare facebookshare telegram
17 Feb 2025
post image

ಉಡುಪಿ, : ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಕಾಲುಸಂಕ ನಿರ್ಮಾಣ ಕಾಮಗಾರಿಗಳಿಗೆ ಆದ್ಯತೆ ನೀಡಿ, ಮುಂಬರುವ ಮೂರು ವರ್ಷಗಳಲ್ಲಿ ಜಿಲ್ಲೆಗೆ ಅಗತ್ಯವಿರುವ ಕಾಲಸಂಕ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮಲೆನಾಡು ಭಾಗಗಳಲ್ಲಿ ಹಳ್ಳ-ಕೊಳ್ಳಗಳನ್ನು ದಾಟಲು ಗ್ರಾಮೀಣ ಭಾಗದ ಜನರು ಕಾಲುಸಂಕಗಳನ್ನೇ ತಮ್ಮ ಸಂಚಾರಕ್ಕೆ ಬಳಸುತ್ತಾರೆ. ಈ ಹಿಂದೆ ಅವಘಡಗಳೂ ಸಹ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಡೆದಿವೆ. ಜನರ ಅನುಕೂಲಕ್ಕೆ ಜಿಲ್ಲೆಯಲ್ಲಿ ೪೧೩ ಹೊಸಕಾಲು ಸಂಕಗಳ ನಿಮಾಣಕ್ಕೆ ಪ್ರಸ್ತಾವನೆಯನ್ನು ೫೧.೭೭ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಈಗಾಗಳೆ ಈ ಹಿಂದೆ ೩೦ ಕೋಟಿ. ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಿ, ಮುಂಬರುವ ಮೂರು ವರ್ಷಗಳ ಒಳಗಾಗಿ ಕಾಲುಸಂಕಗಳನ್ನು ನಿರ್ಮಾಣಮಾಡಲಾಗುವುದು ಎಂದರು.

ಹೆದ್ದಾರಿಯ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಪ್ರಥಮ ಹಂತದಲ್ಲಿ ಟೆಂಟ್‌ಗಳನ್ನು ಹಾಕಿ ಹೋಟೆಲ್ ಅಥವಾ ಅಂಗಡಿ ಮುಂಗಟ್ಟುಗಳನ್ನು ಜನರು ನಡೆಸುತ್ತಾರೆ. ನಂತರದ ದಿನಗಳಲ್ಲಿ ಶಾಶ್ವತವಾಗಿ ಕಟ್ಟಡ ನಿರ್ಮಾಣ ಮಾಡಿ, ವಾಣಿಜ್ಯ ವಹಿವಾಟು ನಡೆಸುವುದರಿಂದ ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸಿ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಹೊಸದಾಗಿ ಇವುಗಳ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ನಿರ್ಮಾಣ ಗೊಂಡಿರುವುಗಳನ್ನು ಹಂತಹAತವಾಗಿ ತೆರವುಗೊಳಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚು ರಸ್ತೆ ಅಪಘಾತ ಉಂಟಾದ ಕಪ್ಪುಚುಕ್ಕೆ ಸ್ಥಳಗಳನ್ನು ಪೊಲೀಸರ ಸಹಯೋಗದೊಂದಿಗೆ ಗುರುತಿಸಲಾಗಿದೆ. ಇಲ್ಲಿ ವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಂಡು ರಸ್ತೆ ಅಪಘಾತಗಳು ಆಗದಂತೆ ನೋಡಿಕೊಳ್ಳಲು ಅವಶ್ಯವಿರುವ ಅನುದಾನವನ್ನು ಆದ್ಯತೆಯ ಮೇಲೆ ನೀಡಲಾಗುವುದು ಎಂದರು.

ರಾಜ್ಯ ಹೆದ್ದಾರಿಯ ೬ ಮೀಟರ್ ನಂತರದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಆದರೆ ಜಿಲ್ಲಾ ರಸ್ತೆಯಲ್ಲಿ ೨೫ ಮೀ. ವರೆಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ಜಾಗ ಬಿಡಬೇಕು ಹಾಗೂ ಈಗಾಗಲೇ ನಿರ್ಮಾಣಗೊಂಡಿರುವ ಮನೆಗಳ ಮೇಲೆ ಹೆಚ್ಚುವರಿ ಮೇಲ್ಮಹಡಿ ಕಟ್ಟಡ ನಿರ್ಮಾಣಕ್ಕೆ ಸಹ ಅನುಮತಿ ನೀಡುತ್ತಿಲ್ಲ ಎಂಬ ದೂರುಗಳು ಈ ಭಾಗದಲ್ಲಿ ಹೆಚ್ಚು ಸಮಸ್ಯೆಯಾಗಿದೆ. ಈ ಬಗ್ಗೆ ಪರಿಶೀಲಿಸಿ ೬ ಮೀ. ಗೆ ಎರಡೂ ರಸ್ತೆಗಳಲ್ಲಿ ನಂತರ ಎನ್.ಓ.ಸಿ ನೀಡಲು ಕ್ರಮವಹಿಸಿ, ಜನರಿಗೆ ಅನ್ಯಾಯವಾಗದಂತೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಆಗಿರುವ ಅನುದಾನವನ್ನು ಪೂರ್ಣಪ್ರಮಾಣದಲ್ಲಿ ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ಮಾತನಾಡಿ, ಕರಾವಳಿ ಭಾಗದಲ್ಲಿ ಹೆಚ್ಚು ಪ್ರಮಾಣದ ಮಳೆ ಬೀಳುತ್ತದೆ. ಇಲ್ಲಿ ಯಾವುದೇ ಕಟ್ಟಡ ಅಥವಾ ಸೇತುವೆ ನಿರ್ಮಾಣ ಮಾಡುವಾಗ ಇಲ್ಲಿನ ಪ್ರಾಕೃತಿಕ ಹವಾಮಾನಕ್ಕೆ ಅನುಗುಣವಾಗಿ ಕಟ್ಟಡ, ಸೇತುವೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಇಲ್ಲಿಗೆ ತಕ್ಕಂತೆ ವಿನ್ಯಾಸ ರಚಿಸಿ, ಕೈಗೊಳ್ಳಬೇಕು. ನದಿಗಳಿಗೆ ನಿರ್ಮಾಣ ಮಾಡಿರುವ ಸೇತುವೆ ಬಳಿ ಮರಳು ಗಣಿಗಾರಿಕೆ ಕೈಗೊಳ್ಳುವುದರಿಂದ ಸೇತುವೆ ಕಟ್ಟಡಕ್ಕೆ ಹಾನಿ ಉಂಟಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು.

ಶಾಸಕ ಸುನಿಲ್ ಕುಮಾರ್ ಮಾತನಾಡಿ, ಹೆಬ್ರಿ ತಾಲೂಕಿನ ಮಟ್ಟಾವುನಲ್ಲಿ ಅಧಿಕ ಸಂಖ್ಯೆಯ ಮಲೆಕುಡಿಯ ಜನಜಾಂಗದವರು ವಾಸಿಸುತ್ತಿರುವ ಹಿನ್ನೆಲೆ, ಅವರುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ, ರಸ್ತೆ ಪಕ್ಕದಲ್ಲಿ ಅನಧಿಕೃತ ಅಂಗಡಿ ನಿರ್ಮಾಣವಾಗದಂತೆ ಎಚ್ಚರವಹಿಸಲು, ಜಿಲ್ಲಾ ಹೆದ್ದಾರಿ ಅಕ್ಕಪಕ್ಕದಲ್ಲಿ ೨೫ ಮೀಟರ್ ವ್ಯಾಪ್ತಿಯೊಳಗೆ ಕಟ್ಟಡ ನಿರ್ಮಾಣ ಮಾಡಬಾರದು ಎಂಬ ನಿಯಮದಿಂದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ, ಮಳೆಯಿಂದ ಹಾಳಾದ ರಸ್ತೆಗಳ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡುವಂತೆ ಸಚಿವರ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಕಿಂಡಿ ಆಣೆಕಟ್ಟು, ಮೇಲ್ಸೇತುವೆ ಒಳಗೊಂಡAತೆ ನಿರ್ಮಾಣ ಮಾಡುವಾಗ ಅವಶ್ಯಕತೆ ಇರುವ ಕಡೆ ಆಣೆಕಟ್ಟು ನಿರ್ಮಾಣ ಮಾಡಬೇಕು ಎಂದರು.

ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬೈಂದೂರು ತಾಲೂಕಿನಲ್ಲಿ ಕಾಲುಸಂಕಗಳಿಗೆ ಬಹುದೊಡ್ಡ ಬೇಡಿಕೆಯಿದ್ದು, ಆದ್ಯತೆಯ ಮೇಲೆ ಕಾಲುಸಂಕ ನಿರ್ಮಾಣ ಕಾರ್ಯ ಕೈಗೊಳ್ಳುವುದರಿಂದ ಕೃಷಿ ಚಟುವಟಿಕೆಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಾಂತಾಗುತ್ತದೆ ಎಂದು ಮನವಿ ಮಾಡಿದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಜಿಲ್ಲೆಯಲ್ಲಿ ಅಧಿಕ ಮಳೆಯಾಗುವ ಹಿನ್ನೆಲೆ, ರಸ್ತೆಯ ನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ಹಾಗೂ ಎಂ.ಡಿ.ಆರ್ ಅಪ್‌ಗ್ರೇಡೇಶನ್ ಆಗಿರುವುದರಿಂದ ರಸ್ತೆ ದುರಸ್ಥಿ ನಿರ್ವಹಣೆ ಕಾಮಗಾರಿಯನ್ನು ಸಮರ್ಪಕವಾಗಿ ಮಾಡುವಂತೆ ಸಚಿವರ ಗಮನಕ್ಕೆ ತಂದರು.

ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಬಂಕರಕಟ್ಟೆಯಲ್ಲಿ ಸೇತುವೆಯ ನಿರ್ಮಾಣವನ್ನು ಕೆಳಭಾಗದಲ್ಲಿ ನಿರ್ಮಾಣ ಮಾಡಿರುವ ಹಿನ್ನೆಲೆ, ಮಳೆಗಾಲದಲ್ಲಿ ನೀರು ಸೇತುವೆಯ ಮೇಲ್ಭಾಗದಲ್ಲಿ ಹರಿಯುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಹಾಯಕಿ ಜೆ.ಜಿ. ಶಾಂತಲಾ, ಗುತ್ತಿಗೆದಾರರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.