



ಅಜೆಕಾರು:ಉದ್ಯಮಗಳು ಬೆಳೆದಾಗ ಹಳ್ಳಿಗಳ ಪ್ರಗತಿಯಾಗಲು ಸಾಧ್ಯ, ಅಜೆಕಾರಿನಂತಹ ಸಣ್ಣ ಊರಿನಲ್ಲಿ ಶಾಲೋಮ್ ಪ್ರಗತಿ ಎನ್ನುವ ವಾಣಿಜ್ಯ ಸಂಕೀರ್ಣದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ಸಿಗುವಂತಾಗಲಿ ಎಂದು ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ ಶೆಟ್ಟಿ ಹೇಳಿದರು.
ಅವರು ಏಪ್ರಿಲ್ 14 ರಂದು ಅಜೆಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಸೂಪರ್ ಮಾರ್ಕೆಟ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ಅಜೆಕಾರು ಸೆಕ್ರೇಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ಪ್ರವೀಣ್ ಅಮೃತ್ ಮಾರ್ಟಿಸ್ ನೂತನ ವಾಣಿಜ್ಯ ಹಾಗೂ ವಸತಿ ಸಮ್ಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿ, ಹಳ್ಳಿಯ ಜನರು ಯಾವುದೇ ಸವಲತ್ತುಗಳಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣದಲ್ಲಿ ಎಲ್ಲವೂ ಸಿಗಲಿದೆ. ಈ ಉದ್ಯಮ ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೇ ಸಮಾಜವನ್ನು ಬೆಸೆಯುವ ಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು.
ಅಜೆಕಾರು ಪದ್ಮಗೋಪಾಲ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ,ಒಂದು ಗ್ರಾಮ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ವಾಣಿಜ್ಯ ಚಟುವಟಿಕೆಗಳು ಬೆಳೆಯಬೇಕು,ಈ ನಿಟ್ಟಿನಲ್ಲಿ ಅಜೆಕಾರು ಉದ್ಯಮಿ ಸುಜಯ ಶೆಟ್ಟಿ ಹಾಗೂ ಅವರ ಪಾಲುದಾರರು ಕೇವಲ ಲಾಭಕ್ಕಾಗಿ ಉದ್ಯಮ ಮಾಡಿದವರಲ್ಲ ತಮ್ಮ ಊರಿನ ಜನರಿಗೆ ಒಂದಷ್ಟು ಉದ್ಯೋಗ ,ವ್ಯಾಪಾರ ಅಭಿವೃದ್ಧಿಯಾಗಲಿ ಎನ್ನುವ ಮನೋಭಾವನೆಯಿಂದ ಉದ್ಯಮ ಆರಂಭಿಸಿದ್ದಾರೆ. ಅಜೆಕಾರಿನ ಸಣ್ಣ ಊರಿನಲ್ಲಿ ಸೂಪರ್ ಮಾರ್ಕೆಟ್ ನಂತಹ ಪರಿಕಲ್ಪನೆ ಅದ್ಭುತ, ಜನರಿಗೆ ತಮ್ಮ ಊರಿನಲ್ಲಿಯೇ ಎಲ್ಲಾ ಸೌಲಭ್ಯಗಳು ಸಿಗುವಂತಾಗಲಿ ಎಂದು ಆಶಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.