


ಕಾರ್ಕಳ: ನಗರದ ಜೋಡುರಸ್ತೆಯ ಸಹಕಾರ ಸಿಂಧೂರ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡಿರುವ ಎನ್‌ಪಿ ಫರ್ನಿಚರ್ಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಮಳಿಗೆಯನ್ನು ಉದ್ಯಮಿ ಶ್ರೀಪತಿ ಭಟ್ ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ರವೀಂದ್ರ ಪ್ರಭು ಕಡಾರಿ, ಎನ್‌ಪಿ ಎಲೆಕ್ಟ್ರಾನಿಕ್ಸ್ ಸಂಸ್ಥೆ ಈಗ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿದ್ದು, ಸಹಕಾರ ಸಿಂಧೂರ ಕಟ್ಟಡದ ಮೂಲಕ ಹೊಸ ಉದ್ಯಮಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದರು. ವಿಶಾಲ್ ಮಾರ್ಟ್ ಹಾಗೂ ಭಾರತ್ ಸಿನೆಮಾಸ್ ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆಗಳಿಂದ ಜೋಡುರಸ್ತೆ ಪ್ರಮುಖ ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿದ್ದು, ಬೃಹತ್ ಎಲೆಕ್ಟ್ರಾನಿಕ್ಸ್ ಮಳಿಗೆಗಳು ಮತ್ತಷ್ಟು ಹೆಚ್ಚಾಗಬೇಕು ಎಂದು ಆಶಿಸಿದರು.
ಲಕ್ಷ್ಮೀ ವಾದಿರಾಜ ನೆಕ್ಕರಪಲ್ಕೆ ಮಾತನಾಡಿ, ಎನ್‌ಪಿ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ಸ್ ಮಳಿಗೆ ಸುಂದರವಾಗಿ ಮೂಡಿಬಂದಿದ್ದು, ಸಂಸ್ಥೆಗೆ ಜನರ ಆಶೀರ್ವಾದ ಮತ್ತು ಬೆಂಬಲ ದೊರೆಯಲಿ ಎಂದು ಹಾರೈಸಿದರು.
ಕ್ರಿಯೇಟಿವ್ ಕಾಲೇಜಿನ ಸಹಸಂಸ್ಥಾಪಕ ಅಶ್ವಥ್ ಎಸ್.ಎಲ್. ಅವರು ಎನ್‌ಪಿ ಫರ್ನಿಚರ್ಸ್ ವೆಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿ, ಜೋಡುರಸ್ತೆಯ ಆಧುನಿಕ ಬೆಳವಣಿಗೆಗೆ ಇಂತಹ ಉದ್ಯಮಗಳು ಸಹಕಾರಿಯಾಗಲಿವೆ. ಸಹಕಾರ ಸಿಂಧೂರ ಕಟ್ಟಡವು ಕಾರ್ಕಳದ ಆಧುನಿಕತೆಗೆ ತಿಲಕವಿಟ್ಟಂತಿದ್ದು, ಜನರನ್ನು ಇನ್ನಷ್ಟು ಹತ್ತಿರಕ್ಕೆ ತರುವ ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂದರು. ಜನರೊಂದಿಗಿನ ಒಡನಾಟದ ಮೂಲಕ ಎನ್‌ಪಿ ಗ್ರೂಪ್ಸ್ ವಿವಿಧ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿದೆ ಎಂದು ಹೇಳಿದರು.
ಬೈಲೂರು ವಿಕ್ರಂ ಹೆಗ್ಡೆ ಮಾತನಾಡಿ, ಶ್ರಾವಣ ಶುಕ್ರವಾರದ ಶುಭ ಸಂದರ್ಭದಲ್ಲಿ ಜೋಡುರಸ್ತೆ ಹೊಸ ಉದ್ಯಮಗಳ ಕೇಂದ್ರವಾಗಿ ರೂಪುಗೊಳ್ಳುತ್ತಿರುವುದು ಸಂತಸದ ಸಂಗತಿ. ಕಾರ್ಕಳ ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿದ್ದು, ಸಹಕಾರ ಸಿಂಧೂರ ಕಟ್ಟಡವು ಈ ಬೆಳವಣಿಗೆಯ ಸಂಕೇತವಾಗಿದೆ ಎಂದರು.
ಉದ್ಘಾಟಕರಾದ ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್ ಮಾತನಾಡಿ, ಆಧುನಿಕ ಜಗತ್ತು ನಿರಂತರ ಬದಲಾವಣೆಯತ್ತ ಸಾಗುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತ ಸಾಗಿದಾಗ ಮಾತ್ರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಇತಿಹಾಸ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯ ಹೊಂದಿರುವ ಕಾರ್ಕಳವು ಜಾತಿ, ಮತ ಭೇದವಿಲ್ಲದೆ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಸಾರಿದ ನಗರವಾಗಿದೆ ಎಂದರು.
ಉದಯಕುಮಾರ್ ಶೆಟ್ಟಿ ಮಾತನಾಡಿ, ಉದ್ಯಮಗಳು ಸಮಾಜಮುಖಿಯಾಗಿ ಬೆಳೆಯಬೇಕು. ಉದ್ಯಮಗಳು ಬೆಳೆದಾಗ ಸಮಾಜವೂ ಬೆಳೆಯುತ್ತದೆ. ಜನರ ಮಾನಸಿಕ ಬೆಳವಣಿಗೆ ಹಾಗೂ ಸಹಕಾರ, ಸಹಬಾಳ್ವೆಗೆ ಉದ್ಯಮಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಎನ್‌ಪಿ ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಯ ಆರಂಭ ಹೆಮ್ಮೆಯ ಸಂಗತಿಯಾಗಿದೆ. ಆಧುನಿಕ ಉಪಕರಣಗಳು ಹಾಗೂ ಹೊಸ ತಂತ್ರಜ್ಞಾನಗಳೊಂದಿಗೆ ಸಂಸ್ಥೆ ಮುಂದುವರಿಯಲಿ. ಸ್ಥಳೀಯ ಪರಿಸರದಲ್ಲಿ ಉದ್ಯಮಗಳ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಉದ್ಯಮಿ ಪ್ರಮಾಲ್ ಕುಮಾರ್ ಮಾತನಾಡಿ, ಕಾರ್ಕಳವು ಹೈಟೆಕ್ ಸಿಟಿಯಾಗಿ ಬೆಳೆಯುವಲ್ಲಿ ಎನ್‌ಪಿ ಗ್ರೂಪ್‌ನ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.
ಪಾಲುದಾರರಾದ ವಾಸುದೇವ ಭಟ್ ನೆಕ್ಕರಪಲ್ಕೆ ಮಾತನಾಡಿ, ಸಂಸ್ಥೆಯ ಬೆಳವಣಿಗೆಯಲ್ಲಿ ಸಿಬ್ಬಂದಿಯ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಸಿಬ್ಬಂದಿಯೇ ಉದ್ಯಮದ ಜೀವಾಳವಾಗಿದ್ದು, ಅವರ ಪರಿಶ್ರಮವೇ ನನಗೆ ನಿರಂತರ ಪ್ರೇರಣೆ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಚಂದ್ರಕಾಂತ್ ಶೆಟ್ಟಿ, ಸುಮಿತ್ ಶೆಟ್ಟಿ ಕೌಡೂರು, ನೀರೆ ರವೀಂದ್ರ ನಾಯಕ್, ಸಂತೋಷ್ ರಾವ್, ಜಾನ್ ಡಿ’ಸಿಲ್ವಾ, ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರವೀಂದ್ರ ಪ್ರಭು ಕಡಾರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ರಮೇಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಧನ್ಯವಾದ ಸಮರ್ಪಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.