

ಬೆಂಗಳೂರು:ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಇನ್ಮುಂದೆ ಭಾರಿ ದಂಡ ವಿಧಿಸುವ ಸಾಧ್ಯತೆ ಇದೆ. ಸಂಚಾರ ನಿಯಮ ಉಲ್ಲಂಘಿಸುವವರಿಗೆ ಪ್ರಸ್ತುತ ಇರುವ ದಂಡಕ್ಕಿಂತ ಹಲವು ಪಟ್ಟು ಹೆಚ್ಚಿಸುವಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸದ್ಯ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದರೆ ₹500 ದಂಡ ವಿಧಿಸಲಾಗುತ್ತಿದೆ. ಇದೀಗ ಮೊದಲ ಬಾರಿಗೆ ನಿಯಮ ಉಲ್ಲಂಘಿಸುವವರಿಗೆ ₹5,000 ದಂಡ ವಿಧಿಸುವಂತೆ ಸಾರಿಗೆ ಇಲಾಖೆ ಪ್ರಸ್ತಾವನೆ ಮಾಡಿದೆ.
ಅದೇ ರೀತಿ, ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿದರೆ ₹10,000 ದಂಡ ವಿಧಿಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಯಾವುದೇ ರೀತಿಯ ವಾಹನವನ್ನು ಫುಟ್‌ಪಾತ್ ಮೇಲೆ ಚಲಾಯಿಸಿದರೂ ಈ ದಂಡ ಅನ್ವಯಿಸುವ ಸಾಧ್ಯತೆಯಿದೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಫುಟ್‌ಪಾತ್‌ಗಳ ಮೇಲೆಯೇ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗೆ ಇಳಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತದ ಆತಂಕವೂ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದಂಡದ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಈ ಸಂಬಂಧ ಸಾರಿಗೆ ಆಯುಕ್ತರು ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪ್ರಸ್ತಾವನೆಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದುಕೊಂಡ ಬಳಿಕ ಅಂತಿಮ ಆದೇಶ ಹೊರಡಿಸುವ ಸಾಧ್ಯತೆಯಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಸರ್ಕಾರದ ಅಂತಿಮ ಆದೇಶ ಹೊರಬಂದ ಬಳಿಕವಷ್ಟೇ ಹೊಸ ದಂಡದ ಮೊತ್ತ ಜಾರಿಗೆ ಬರಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.