



ಕಾರ್ಕಳ : ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಬಂಗ್ಲೆಗುಡ್ಡೆಯಲ್ಲಿ ಮೇ. 1 ರಂದು ನಡೆದಿದೆ. ಇನಾಯತ್ (32), ಬೀಬಿ ಬಾನು (57) ಹಲ್ಲೆಗೊಳಗಾದವರಾಗಿದ್ದಾರೆ. ಆಪಾದಿತರಾದ ಅಲ್ತಾಫ್, ಅದ್ನಾನ್, ಅತೀಫ್, ಅಜೀಮ್ ಮತ್ತು ಶಬೀರ್ ಮಾರಕಾಯುಧಗಳ ಜೊತೆಗೆ ಬೀಬಿ ಬಾನು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶಿಸಿದ್ದಾರೆ. ಹಾಗೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಇನಾಯತ್ ಅವರ ತಾಯಿ ಬೀಬಿ ಭಾನು(57) ವಿಚಾರಿಸಲು ಮನೆಯೊಳಗಿನಿಂದ ಹೊರಗೆ ಬಂದಿದ್ದು, ಈ ವೇಳೆ ಅಪಾದಿತರಾದ ಅಲ್ತಾಫ್, ಅದ್ನಾನ್ ಹಾಗೂ ಅತೀಫ್ ಆಕೆಯ ಮೇಲೆ ಮಣ್ಣು ಎಸೆದಿದ್ದಾರೆ. ಅಲ್ತಾಫ್ ಮತ್ತು ಅದ್ನಾನ್ ಅವರ ಬಲಕೈಯನ್ನು ಹಿಡಿದು ತಿರುಗಿಸಿ ಹಲ್ಲೆ ನಡೆಸಿದ್ದಾರೆ. ಅವರು ಬೊಬ್ಬೆ ಹೊಡೆದ ಸಂದರ್ಭದಲ್ಲಿ ಇನಾಯತ್ ಅವರು ತಾಯಿಯ ರಕ್ಷಣೆಗೆ ಬಂದಿದ್ದಾರೆ. ಈ ವೇಳೆ ಅಜೀಮ್ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಇನಾಯತ್ ಅವರ ಹಣೆಗೆ ಮತ್ತು ಮೂಗಿಗೆ ಹೊಡೆದ ಪರಿಣಾಮ ಮೂಗಿನಿಂದ ರಕ್ತ ಸೋರಲಾರಂಭಿಸಿದೆ. ಜೊತೆಗೆ ಶಬೀರ್ ಎಂಬಾತ ನೆಲಕ್ಕೆ ದೂಡಿ ಹಾಕಿ ಎರಡೂ ಕಾಲುಗಳಿಗೆ ತುಳಿದಿದ್ದಾನೆ. ಗಾಯಾಳುಗಳು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.