

ಕಾರ್ಕಳ: ನಾಯಿಯನ್ನು ಅಟ್ಟಿಸಿಕೊಂಡು ಹೋಗುವಾಗ ಆವರಣವಿಲ್ಲದ ತೆರೆದ ಬಾವಿಗೆ ಬಿದ್ದ ಬೃಹತ್ ಗಾತ್ರದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಸೆರೆಹಿಡಿದು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಿದ್ದಾರೆ.
ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮದ ಮುಜಕಿಲದಲ್ಲಿ ನಿವಾಸಿ ಅಂತೋನಿ ಅವರ ಮನೆಯ ನಾಯಿಯನ್ನು ಹಿಡಿಯಲು ಚಿರತೆ ಬೆನ್ನಟ್ಟಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಆವರಣವಿಲ್ಲದ ತೆರೆದ ಬಾವಿಗೆ ಬಿದ್ದಿದೆ. ಬಾವಿಯ ಪೊಟರೆಯೊಳಗೆ ಸೇರಿಕೊಂಡಿದ್ದ ಚಿರತೆಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಾರ್ಕಳ ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಗೆ ಬೋನು ಇಳಿಸಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಬಳಿಕ ಅದನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ.
ಸುಮಾರು ಐದು ವರ್ಷ ಪ್ರಾಯದ, 100 ಕೆ.ಜಿ. ತೂಕದ ಗಂಡು ಚಿರತೆ ಇದಾಗಿದೆ. ಈ ಭಾಗದಲ್ಲಿ ಕಂಡುಬಂದ ಬೃಹತ್ ಗಾತ್ರದ ಚಿರತೆಗಳಲ್ಲಿ ಇದೂ ಒಂದಾಗಿದೆ ಎಂದು ತಿಳಿದುಬಂದಿದೆ.
ಕಾರ್ಕಳ ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ಶಿವಕುಮಾರ್ ಮತ್ತು ಸುಧೀರ್, ಅರಣ್ಯ ರಕ್ಷಕರಾದ ಸುರೇಶ್ ಹಾಗೂ ಹಿತೇಶ್, ಅರಣ್ಯ ವೀಕ್ಷಕ ಯಮನೂರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.