



ಕಾರ್ಕಳ: ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಟಿಕೆಟ್ ಬಯಸಿ ಸಿಗದಿದ್ದಾಗ ಅಂದು ಗೋಪಾಲ ಭಂಡಾರಿ ಬದುಕಿದ್ದಾಗಲೆ ಸಾರ್ವಜನಿಕವಾಗಿ ಅವರ ಶವಯಾತ್ರೆ ನಡೆಸಿದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿಗೆ ಈಗ ನಾಲ್ಕು ವರ್ಷದ ಬಳಿಕ ಭಂಡಾರಿಯವರ ನೆನಪಾಗಿದೆ, ಪುತ್ಥಳಿ ನಿರ್ಮಿಸುವುದಕ್ಕೆ ಜ್ಞಾನೋದಯವಾಗಿದೆ. ತಾವು ಮೊದಲು ತಮ್ಮ ಬದ್ಧತೆ ಏನೆಂಬುದನ್ನು ಸ್ಪಷ್ಟಪಡಿಸಿ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಸವಾಲು ಹಾಕಿದ್ದಾರೆ.
ಹೆಬ್ರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಟಿಕೆಟ್ ಸಿಗದಿದ್ದಾಗ ಜೀವಂತವಿದ್ದ ವ್ಯಕ್ತಿಯನ್ನೇ ಶವಯಾತ್ರೆ ನಡೆಸಿ ಸುಟ್ಟರು, ಊರೆಲ್ಲ ಸಂಭ್ರಮಿಸಿದ್ದರು. ಅಂದು ಕಣ್ಣೀರು ಹಾಕುವಂತೆ ಮಾಡಿ ಮಾನವೀಯತೆ ಮರೆತು ಅಮಾನವೀಯವಾಗಿ ನಡೆಸಿಕೊಂಡವರು, ಇಂದು ಅವರ ಹೆಸರಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅಂದು ಗೌರವ ಕೊಡದವರು ಇಂದು ಪುತ್ಥಳಿ ನಿರ್ಮಾಣದಂತಹ ಭರವಸೆ ನೀಡುತ್ತ ನಾಟಕವಾಡುತ್ತಿದ್ದಾರೆ. ಅಂದಿನ ಆ ಘೋರ ಕಹಿ ಘಟನೆ ಶವಯಾತ್ರೆ ನಡೆಸಿದ್ದನ್ನು ನೀವು ಮರೆತರೂ ಕ್ಷೇತ್ರದ ಜನತೆ ಮರೆತಿಲ್ಲ. ಅಂದು ಟಿಕೆಟ್ ಸಿಗದೆ ಇದ್ದಾಗ ಕೀಳು ಮಟ್ಟಕ್ಕೆ ಇಳಿದ ತಾವು ನಾಲ್ಕು ವರ್ಷ ಬಿಜೆಪಿ ಜೊತೆ ಗೆಳೆತನ ಬೆಳೆಸಿಕೊಂಡಿದ್ದಿರಿ. ತಾವೊಬ್ಬ ಅವಕಾಶವಾದಿ ರಾಜಕಾರಣಿಯಾಗಲು ಬಯಸುತ್ತಿದ್ದೀರಿ. ಟಿಕೆಟ್ ಸಿಕ್ಕಾಗ ಒಂದು ಪಕ್ಷ, ಒಂದು ನೀತಿ… ಸಿಗದೇ ಇದ್ದಾಗ ಇನ್ನೊಂದು ಕಡೆ ವಾಲುವ ನೀವು ನಿಜವಾಗಿಯೂ ಯಾವುದರಲ್ಲಿ ಇದ್ದೀರಿ? ನಿಮ್ಮ ನಿಜವಾದ ಬದ್ಧತೆ ಏನೆಂಬುದನ್ನು ಮೊದಲು ಸ್ಪಷ್ಟ ಪಡಿಸಿ ಎಂದರು.
ಓರ್ವ ಜನಪ್ರತಿನಿಧಿಗೆ ಹೇಗೆ ಗೌರವ ಕೊಡಬೇಕೆಂಬುದು ಬಿಜೆಪಿಗೆ ತಿಳಿದಿದೆ. ಅದೇ ಕಾರಣದಿಂದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರಿಗೆ ಗೌರವ ನೀಡಿದ್ದೇವೆ. ಕಾರ್ಕಳ ಉತ್ಸವ ಸಂದರ್ಭ ಉತ್ಸವದ ಪ್ರಧಾನ ವೇದಿಕೆಗೆ ಭಂಡಾರಿಯವರ ಹೆಸರನ್ನು ಇಟ್ಟು ದೊಡ್ಡ ಮಟ್ಟದ ಗೌರವ ಸಲ್ಲಿಸಿದ್ದೇವೆ. ಇಡೀ ನಾಡು ಅವರಿಗೆ ಸಲ್ಲಿಸಿದ ಗೌರವದ ಬಗ್ಗೆ ಕೊಂಡಾಡಿದೆ. ಅವರಿಗೆ ಸಲ್ಲಬೇಕಾದ ಎಲ್ಲ ಗೌರವವನ್ನು ಬಿಜೆಪಿ ಸಲ್ಲಿಸುತ್ತ ಬಂದಿದೆ. ಮುಂದೆಯೂ ನೀಡುತ್ತದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯಾದ ತಾವು ಚುನಾವಣೆ ಹೊತ್ತಲ್ಲಿ ಇಂತಹ ಪುತ್ಥಳಿ, ಇನ್ನಿತರ ವಿಚಾರ ಮುಂದಿಟ್ಟುಕೊಂಡು ಜನರ ಮುಂದೆ ಭಾವನಾತ್ಮಕವಾಗಿ, ನಾಟಕೀಯವಾಗಿ ವರ್ತಿಸುತ್ತಿದ್ದೀರಿ ಎಂದು ಹೇಳಿದರು.
ಸಭೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಸತೀಶ್ ಪೈ, ಮುಟ್ಲುಪ್ಪಾಡಿ ಸುಹಾಶ್ ಶೆಟ್ಟಿ ಸಹಿತ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂರಾರು ಮಂದಿ ಕಾರ್ಯಕರ್ತರು ಹಾಜರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.