


ಕಾರ್ಕಳ: ಕುಕ್ಕುಂದೂರಿನ ನಕ್ಸಲ್ ನಿಗ್ರಹ ಘಟಕದ ತರಬೇತಿ ಶಿಬಿರದಲ್ಲಿ ಅಕ್ಟೋಬರ್ 6ರಂದು CPR (ಹೃದಯ ಮತ್ತು ಶ್ವಾಸಕೋಶದ ಮರುಚೇತನ ಪ್ರಕ್ರಿಯೆ) ಹಾಗೂ ಪ್ರಥಮ ಚಿಕಿತ್ಸೆ ಕುರಿತು ವಿಶೇಷ ಪ್ರಾತ್ಯಕ್ಷಿಕಾ ಕಾರ್ಯಾಗಾರ ನಡೆಯಿತು.
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ನುರಿತ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು CPR ಮತ್ತು ಬೇಸಿಕ್ ಲೈಫ್ ಸಪೋರ್ಟ್ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ನಕ್ಸಲ್ ನಿಗ್ರಹ ದಳದ ಕಮಾಂಡೋಗಳು, ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳದ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳು ಹಾಗೂ ಶಿರ್ಡಿ ಸಾಯಿ ಎಕ್ಸೆಲೆನ್ಸಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಬೇತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಕಮಾಂಡೋಗಳು CPR ಮತ್ತು ಪ್ರಥಮ ಚಿಕಿತ್ಸೆಯ ವಿಧಾನಗಳನ್ನು ಸ್ವತಃ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ರೊ. ಮಂಜುನಾಥ ಹೆಗ್ಡೆ, ಮಾರ್ಗದರ್ಶಕ ರೊ. ಡಾ. ಭರತೇಶ್ ಆದಿರಾಜ್, ನಿಕಟಪೂರ್ವ ಅಧ್ಯಕ್ಷ ರೊ. ಸುರೇಂದ್ರ ನಾಯಕ್, ರೊ. ಉಪೇಂದ್ರ ವಾಗ್ಲೆ ಹಾಗೂ ರೊ. ಕೃಷ್ಣಪ್ಪ ಉಪಸ್ಥಿತರಿದ್ದು ಸಹಕರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.