



ಕಾರ್ಕಳ: ಸ್ವಾಮಿ ವಿವೇಕಾನಂದರ ಚಿಂತನೆಗಳು ಭಾರತ ಮಾತ್ರವಲ್ಲ ವಿಶ್ವವ್ಯಾಪಿಯಾದುದು. ಯುವಕರು ದೇಶದ ಭವಿಷ್ಯ ಉಜ್ವಲಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆತ್ಮೋದ್ಧಾರ ಮಾರ್ಗವೇ ಜಗವನ್ನು ಹಾಗೂ ಮನುಷ್ಯರನ್ನು ಅರಿಯಲು ಇರುವ ದಾರಿ. ಯುವಕರ ಕಣ್ಮಣಿಯಾಗಿ, ಸಿಡಿಲ ಸಂತನಾಗಿ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಮಹಾತ್ಮ ಸ್ವಾಮಿ ವಿವೇಕಾನಂದರು. ಎಲ್ಲರಿಗೂ ಸ್ಪೂರ್ತಿಯ ಚಿಲುಮೆ ಎಂದು ಗಣಿತ ಉಪನ್ಯಾಸಕ ಶ್ರೀ ಪ್ರದೀಪ್ ಅಂಚನ್ ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ʼಯುವ ಸಪ್ತಾಹʼದ ಅಂಗವಾಗಿ ನಡೆದ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಗತ್ತು ಭಾರತದ ಕಡೆಗೆ ಕೀಳಾಗಿ ಕಾಣುತ್ತಿರುವಾಗ ಭಾರತದ ಅಂತಃಶಕ್ತಿ, ಆತ್ಮಜ್ಞಾನ, ಆಧ್ಯಾತ್ಮ ಕೊಡುಗೆಗಳ ಕುರಿತು ಪಾಶ್ಚಿಮಾತ್ಯರ ಕಣ್ಣು ತೆರೆಸಿ, ಶ್ರೇಷ್ಠ ಜ್ಞಾನ ಪರಂಪರೆ, ಮೌಲ್ಯಗಳ ಭಂಡಾರ ಭಾರತ ಎಂಬುದನ್ನು ತಿಳಿಸಿಕೊಟ್ಟವರು ವಿವೇಕಾನಂದರು. ಪುಣ್ಯಭೂಮಿ ಭಾರತದ ಅಣು ಅಣುವಿನಲ್ಲೂ ದೈವತ್ವವಿದೆ. ಇಂತಹ ಉತ್ಕೃಷ್ಟ ಯೋಚನೆ ಹೊಂದಿದ್ದ. ಋಷಿ ಮುನಿಗಳ ತಪಸ್ಸಿನಿಂದ ಭರತಭೂಮಿ ಇನ್ನಷ್ಟು ಪವಿತ್ರಗೊಂಡಿತ್ತು. ಆದ್ದರಿಂದ ಭಾರತೀಯರಾದ ನಾವೆಲ್ಲರೂ ವಿವೇಕಾನಂದರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ನೈತಿಕ ಶಕ್ತಿ, ಉತ್ತಮ ವಿಚಾರಧಾರೆಗಳು, ಎಲ್ಲರೂ ಸಮಾನರು ಹಾಗೂ ಮನುಷ್ಯತ್ವದಲ್ಲಿ ದೇವರನ್ನು ಕಂಡವರು ವಿವೇಕಾನಂದರು. ಅವರ ಮಾತುಗಳು ನಮ್ಮ ನಡೆ-ನುಡಿಯಲ್ಲಿ ಪ್ರೇರಣೆ ಪಡೆದು ಹಾಗೆಯೇ ಜೀವಿಸುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಎನ್. ಎಸ್. ಎಸ್. ಸಂಯೋಜನಾಧಿಕಾರಿ ಉಮೇಶ್, ಉಪನ್ಯಾಸಕರಾದ ಚಂದ್ರಕಾಂತ್, ರಾಮಕೃಷ್ಣ ಹೆಗಡೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕು. ಸಂಹಿತಾ ಹೆಬ್ಬಾರ್ ವಂದಿಸಿದರು. ಕು. ಶೃದ್ಧಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.