



ಕಾರ್ಕಳ : ಹತ್ತು ದಿನಗಳ ಕಾಲ ವೈಭವವಾಗಿ ಸಂಪನ್ನಗೊಂಡ ಹಲವು ಹೆಗ್ಗಳಿಕೆಯ " ಕಾರ್ಕಳ ಉತ್ಸವ " ಈಗ ರಾಜ್ಯದ ಸಾಂಸ್ಕ್ರತಿಕ "ಬ್ರ್ಯಾಂಡ್ " ಆಗಿ ಪರಿವರ್ತನೆಗೊಂಡಿದೆ ಎಂದು ಇಂಧನ, ಕನ್ನಡ, ಸಂಸ್ಕ್ರತಿ ಸಚಿವ ವಿ.ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಮಾ.೧೦ ರಿಂದ ೨೦ ರ ವರೆಗೆ ನಡೆದ ಕಾರ್ಕಳ ಉತ್ಸವ ಈಗ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮಾತ್ರವಲ್ಲ ಕಾರ್ಕಳವನ್ನು ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿಯೂ ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಉತ್ಸವವನ್ನು ಆಯೋಜಿಸಬೇಕೆಂಬ ಕಲ್ಪನೆ ಹುಟ್ಟಿದ್ದೆ ಒಂದು ವಿಶೇಷ ಸಂದರ್ಭದಲ್ಲಿ. ಕೊರೋನಾದ ಎರಡು ಅಲೆಯಿಂದ ರಾಜ್ಯದ ಆರ್ಥಿಕತೆ ಮಾತ್ರವಲ್ಲ, ಜನರ ಮೈ ಮನಸುಗಳು ಜಡ್ಡುಗಟ್ಟಿತ್ತು. ಯಾವುದೇ ಸಾಹಸಕ್ಕೆ ಕೈ ಹಾಕಬೇಕಿದ್ದರೂ ಹತ್ತು ಬಾರಿ ಯೋಚಿಸಬೇಕಾದ ಸ್ಥಿತಿ ಇತ್ತು. ಆದರೆ ಕೈಗೆತ್ತಿಕ್ಕೊಂಡ ಈ ಕಾರ್ಯ ಈಗ ಅಕ್ಷರಶಃ ಸಾಫಲ್ಯಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತನ್ನ ಯಶಸ್ಸಿನಿಂದಾಗಿ ಇಂದು ರಾಜ್ಯಾದ್ಯಂತ ಮನೆ ಮಾತಾಗಿರುವ ಉತ್ಸವದ ಹಿಂದಿನ ಶ್ರಮ ಅಂದುಕೊಂಡಷ್ಟು ಸಾಮಾನ್ಯವಾದುದಾಗಿರಲಿಲ್ಲ. ಖುದ್ದು ಸಚಿವರು ೧೫೦ಕ್ಕೂ ಹೆಚ್ಚು ಬಾರಿ ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಸಭೆ ನಡೆಸಿದ್ದರು. ೧೫೦೦ ಸ್ವಯಂ ಸೇವಕರು ಹಗಲಿರುಳು ಸೇವೆ ಸಲ್ಲಿಸಿದ್ದರು. ಸಿದ್ಧತೆಗಾಗಿ ೩೭ ಸಮಿತಿಗಳನ್ನು ರಚಿಸಲಾಗಿತ್ತು. ಉತ್ಸವಕ್ಕಾಗಿ ನಡೆಸಿದ ವ್ಯವಸ್ಥಿತ ತಯಾರಿ ಬಂದವರೆಲ್ಲರಿಂದಲೂ ಪ್ರಶಂಸೆಗೆ ಒಳಗಾಯಿತು.ಮೊದಲ ಬಾರಿಗೆ ಕಾರ್ಕಳಕ್ಕೆ ರಾಜ್ಯಪಾಲರು ಆಗಮಿಸಿ ಉತ್ಸವದಲ್ಲಿ ಭಾಗಿಯಾದರು. ಹತ್ತು ದಿನಗಳ ಕಾರ್ಯಕ್ರಮದಲ್ಲಿ ಉತ್ಸವ ಮೆರವಣಿಗೆಯದು ಇನ್ನೊಂದು ತೂಕ. ಕರಾವಳಿಯೂ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಬಂದ ಹತ್ತು ಸಾವಿರ ಕಲಾವಿದರು ಭಾಗವಹಿಸಿದ್ದರು. ಇದಂತೂ ನಭೂತೋ ನ ಭವಿಷ್ಯತಿ ಎಂದರೆ ತಪ್ಪಾಗಲಾರದು. ಮಾರ್ಚ್ 19 ರಂದು ಏಕಕಾಲದಲ್ಲಿ ೩ ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು ಕರಾವಳಿಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಸುಮಾರು ೭೫ ಸಾವಿರದಷ್ಟು ಜನರು ಉತ್ಸವದಲ್ಲಿ ಭೋಜನ ಸವಿದರು. ೧೧೦ ಫುಡ್ ಪಾರ್ಕ್ ಗಳು ತುಳುನಾಡಿನ ಖಾದ್ಯವನ್ನು ಉಣಬಡಿಸಿದವು. ಉತ್ಸವ ಕೇವಲ ಸಾಂಸ್ಕ್ರತಿಕ ವೈಭವ ಮಾತ್ರವಾಗಿರದೇ ಕಾರ್ಕಳ ಸೇರಿದಂತೆ ಕರಾವಳಿಯ ಆರ್ಥಿಕ ಚಟುವಟಿಕೆಗೂ ಹೊಸ ಚೈತನ್ಯ ನೀಡಿದ್ದು, ರಾಜ್ಯದ ಬ್ರ್ಯಾಂಡ್ ಆಗಿ ಪರಿವರ್ತನೆಯಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.