



ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಪಶ್ಚಿಮ ಘಟ್ಟದ ಹಸಿರಸಿರಿಯ ಮಡಿಲಲ್ಲಿ ಪವಡಿಸಿದ ಹಲವಾರು ಪ್ರೇಕ್ಷಣೀಯ ಮತ್ತು ಧಾರ್ಮಿಕ ಸ್ಥಳಗಳಿಂದ ಕೂಡಿದೆ . ಬೆಟ್ಟ, ಗುಡ್ಡ, ಜಲಪಾತಗಳು ಹರಿವ ನೀರ ತೊರೆಗಳು, ಕೆರೆ, ಸಮೃದ್ಧ ಸಸ್ಯ ರಾಶಿಗಳು ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿದೆ.
ಕಾರ್ಕಳವು ಅನಾದಿಕಾಲದಿಂದ ಜೈನ ರಾಜರ ಆಳ್ವಿಕೆಗೆ ಒಳಪಟ್ಟಿದ್ದು
"ಪಾಂಡ್ಯ ನಗರಿ" ಎಂದೇ ಹೆಸರುವಾಸಿಯಾಗಿತ್ತು. ಕ್ರಮೇಣ ಕಪ್ಪು ಬಂಡೆ ಕಲ್ಲುಗಳನ್ನು ಹೊಂದಿರುವ ಈ ಊರನ್ನು "ಕರಿಕಲ್ಲ ನಾಡು" ಎಂದೇ ಖ್ಯಾತಿ ಪಡೆಯಿತು. ಕಾಲ ನಂತರದಲ್ಲಿ ಕಾರ್ಕಳದ ಹೃದಯ ಭಾಗದಲ್ಲಿರುವ ಆನೆಕೆರೆ ಇಂದಾಗಿ "ಕರಿ ಕೊಳದ ನಾಡು ಕಾರ್ಕಳ " ಎಂದೇ ಹೆಸರುವಾಸಿಯಾಯಿತು. ಇದೀಗ ತುಳು ಭಾಷೆಯ ಸೊಗಡಿನಿಂದಾಗಿ ಕಾರ್ಕಳ " ಕಾರ್ಲ"ವಾಗಿ ಮಾರ್ಪಟ್ಟಿದೆ.
ಕಾರ್ಕಳದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು : ಕಾರ್ಕಳ ತಾಲೂಕಿನಲ್ಲಿ ಹಲವಾರು ಜಾತಿ, ಧರ್ಮದ ಜನರು ಒಟ್ಟಾಗಿ ಜೀವನ ನಡೆಸುತ್ತಿರುವ ಕಾರಣದಿಂದಾಗಿ ಅಸಂಖ್ಯಾತ ದೇವಸ್ಥಾನ, ಮಠ ಮಂದಿರಗಳು , ಬಸದಿಗಳು, ಚರ್ಚುಗಳು, ಪರಿಸರ ಪ್ರೇಮಿಗಳಿಗೆ ಸುಂದರ ನೈಸರ್ಗಿಕ ಸ್ಥಳಗಳು ಸದಾ ಸ್ವಾಗತಿಸುತ್ತಿದೆ. ಕಾರ್ಕಳದ 42 ಅಡಿ ಎತ್ತರದ ಬಾಹುಬಲಿಯ ಏಕಶಿಲಾ ವಿಗ್ರಹ, ಚತುರ್ಮುಖ ಬಸದಿ, ಶ್ರೀ ವೆಂಕಟರಮಣ ದೇವಸ್ಥಾನ, ವರಂಗ ಬಸದಿ, ಸಂತ ಲಾರೆನ್ಸ್ ಬಸಿಲಿಕ ಚರ್ಚ್, ಆನೆ ಕೆರೆಯ ಕೆರೆ ಬಸದಿ, ಕೋಟಿ ಚೆನ್ನಯ ಥೀಮ್ ಪಾರ್ಕ್ ಇವುಗಳು ಧಾರ್ಮಿಕ ಸ್ಥಳಗಳಾದರೆ, ದುರ್ಗಾ ಫಾಲ್ಸ್, ಸೀತಾ ನದಿ ನೇಚರ್ ಕ್ಯಾಂಪ್ ಇವು ಪರಿಸರ ಪ್ರೇಮಿಗಳಿಗೆ ಉಲ್ಲಾಸದ ತಾಣವಾಗಿದೆ. ಇದಲ್ಲದೆ ಅದೆಷ್ಟೋ ಅಡವಿಯಲ್ಲಿ ಅವಿತು ಕೂತಿರುವ ನೈಸರ್ಗಿಕ ಜಲಪಾತಗಳು, ನೀರ ತೊರೆಗಳು, ನದಿಗಳ ಸೌಂದರ್ಯ ಅವರ್ಣನೀಯ ಮತ್ತು ಅಸಂಖ್ಯಾತ.
ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ಸಮಾಗಮ: ಕಾರ್ಕಳ ಮತ್ತು ಹೆಬ್ರಿ ಭಾಗದಲ್ಲಿ ಹಿಂದುಗಳು, ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಸಮುದಾಯದ ಬಾಂಧವರು ವಾಸಿಸುತ್ತಿದ್ದು ತುಳು, ಕೊಂಕಣಿ, ಕನ್ನಡ, ಹೀಗೆ ಹಲವು ಭಾಷೆಯ ವಿವಿಧ ಸಮುದಾಯದ ಜನರು ಭ್ರಾತೃತ್ವ ಭಾವದಿಂದ ಒಟ್ಟಾಗಿ ವಾಸಿಸುವ ಮನಮೋಹಕ ದೃಶ್ಯವನ್ನು ಇಲ್ಲಿ ಕಾಣಬಹುದು.
ಪ್ರವಾಸೋದ್ಯಮದಿಂದ ವ್ಯಾಪಾರೋದ್ಯಮದ ಅಭಿವೃದ್ಧಿ : ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋದಂತೆ ವ್ಯಾಪಾರ, ವ್ಯವಹಾರ, ಉದ್ಯಮಗಳು ಬೆಳೆಯುತ್ತಾ ಹೋಗುತ್ತದೆ. ಪ್ರೇಕ್ಷಣೀಯ ಸ್ಥಳಗಳು ಸೃಷ್ಟಿಯಾದಂತೆ ಅದಕ್ಕೆ ಬೇಕಾದ ಮೂಲ ಸೌಕರ್ಯಗಳು, ರಸ್ತೆ , ಬಸ್ಸು ರಿಕ್ಷಾಗಳ ವ್ಯವಸ್ಥೆ, ಹೋಟೆಲ್, ಅಂಗಡಿ , ವ್ಯವಹಾರ ಇವೆಲ್ಲಾ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಪರೋಕ್ಷವಾಗಿ ಅದೆಷ್ಟೋ ಜನರಿಗೆ ಉದ್ಯೋಗ ಸೃಷ್ಟಿಯಾಗಿ ಆರ್ಥಿಕವಾಗಿ ಸಬಲರಾಗುತ್ತಾರೆ. ಈ ರೀತಿಯ ಪ್ರವಾಸೋದ್ಯಮದಿಂದ ಕೇವಲ ಕಾರ್ಕಳ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರತ ತನ್ನ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಪರಿಸರ ಸಂರಕ್ಷಣೆಯ ಜೊತೆಗೆ ಅಭಿವೃದ್ಧಿಕಾರ್ಯ : ಕಾರ್ಕಳ ತಾಲೂಕು ಹಲವಾರು ಪ್ರೇಕ್ಷಣೀಯ ಮತ್ತು ಪ್ರವಾಸಿ ತಾಣಗಳ ತೊಟ್ಟಿಲಾಗಿದ್ದು ಹಲವಾರು ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪ್ರೇಕ್ಷಣೀಯ ಸ್ಥಳಗಳಲ್ಲಿ ಗಮನಿಸಿದಾಗ ಸಮರ್ಪಕವಾದ ರಸ್ತೆಗಳ ಕೊರತೆ, ನೀರಿನ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯ, ಮೂಲ ಸೌಕರ್ಯಗಳು ಇದ್ದರೂ ಅವು ಸಮರ್ಪಕವಾದ ರೀತಿಯಲ್ಲಿ ಕಾರ್ಯನಿರ್ವಹಿಸದೆ ಪ್ರವಾಸಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಹಾಗೆಯೇ ಕೆಲವೊಂದು ಕೆರೆ, ನದಿಗಳಿಗೆ ತಡೆಗೋಡೆ ಮತ್ತು ಪೆನ್ಸಿಂಗ್ ಅಳವಡಿಕೆಯ ಕಾರ್ಯ ಶೀಘ್ರದಲ್ಲೇ ಆಗಬೇಕಾಗಿದೆ. ಕೆಲವೊಂದು ಕಡೆಗಳಲ್ಲಿ ಪ್ರವಾಸಿ ಮಂದಿರಗಳು ತೀರಾ ಹದಗೆಟ್ಟಿದ್ದು ಪ್ರೇಕ್ಷಣೀಯ ಸ್ಥಳಗಳಲ್ಲಿ ಕಸ, ಪ್ಲಾಸ್ಟಿಕ್ ಗಳು ಕಂಡುಬಂದಿದ್ದು ಸ್ವಚ್ಛತೆ ಕಡಿಮೆ ಪ್ರಾಶಸ್ತ್ಯ ದೊರಕಿದಂತಾಗಿದೆ . ಹಾಗೆಯೇ ಅಭಿವೃದ್ಧಿ ಕಾರ್ಯದ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ರಸ್ತೆ ಬದಿಯಲ್ಲಿ ಮರ ಗಿಡಗಳನ್ನು ಬೆಳೆಸಿ ಪಾಲನೆ ಪೋಷಣೆ ಕುರಿತು ಒಂದಿಷ್ಟು ಗಮನ ಹರಿಸಿದರೆ ನಾವು ಅಸಂಖ್ಯಾತ ಪ್ರವಾಸಿಗರನ್ನು ಈ ಮೂಲಕ ಆಕರ್ಷಿಸಬಹುದು.
ಒಟ್ಟಾರೆಯಾಗಿ ಪ್ರವಾಸೋದ್ಯಮವು ಕೇವಲ ಪ್ರೇಕ್ಷಣೀಯ
ಸ್ಥಳಗಳ ಸಂರಕ್ಷಣೆ, ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೆ, ಪರಿಸರ ಸಂರಕ್ಷಣೆ, ಉದ್ಯೋಗ ಸೃಷ್ಟಿ, ವ್ಯಾಪಾರ ವ್ಯವಹಾರ ಉದ್ಯಮಗಳ ಸ್ಥಾಪನೆ ಮತ್ತು ಬೆಳವಣಿಗೆ ಪ್ರೋತ್ಸಾಹ, ದೇಶದ ಆರ್ಥಿಕ ಪ್ರಗತಿಗೆ ಸಹಕಾರ ನೀಡಿದಲ್ಲಿ ಪ್ರವಾಸೋದ್ಯಮವು ಪ್ರವಾಸಿಗರ ಮತ್ತು ಜನರ ಮನಸ್ಸಿನಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನವನ್ನುಗಳಿಸುವುದರ ಜೊತೆಗೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದಾಗಿದೆ .
ಶಶಾಂಕ ಅಂತಿಮ ಜರ್ನಲಿಸಂ ಎಂ ಪಿ ಎಂ ಕಾಲೇಜು ಕಾರ್ಕಳ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.