



ಕುಂದಾಪುರ: ಮಹಿಳೆ ಒಬ್ಬರು ಭಿಕ್ಷಾಟನೆಯಲ್ಲಿ ತಾನು ಗಳಿಸಿದ ಹಣವನ್ನು ಕೂಡಿಟ್ಟು ಲಕ್ಷ ರೂಪಾಯಿ ದಾಟಿದ ಬಳಿಕ ವಿವಿಧ ದೇವಸ್ಥಾನಗಳ ದಾಸೋಹಕ್ಕೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ತಾಲ್ಲೂಕಿನ ಕಂಚುಗೋಡು ಗ್ರಾಮದ ವಯೋವೃದ್ಧೆ ಅಶ್ವತ್ಥಮ್ಮ ತನ್ನ ಗಂಡ, ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿದ್ದ ಅವರು, ಪತಿ ಹಾಗೂ ಮಕ್ಕಳನ್ನು ಕಳೆದುಕೊಂಡ ಬಳಿಕ ಜೀವನ ನಿರ್ವಹಣೆಗೆ ಭಿಕ್ಷಾಟನೆಯಲ್ಲಿ ತೊಡಗಿದರು.
ಸಾಲಿಗ್ರಾಮದ ಆಂಜನೇಯ ದೇವಸ್ಥಾನ, ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನ, ಕದ್ರಿಯ ಮಂಜುನಾಥ ಸ್ವಾಮಿ ದೇವಸ್ಥಾನ, ಸಾಸ್ತಾನದ ಟೋಲ್ ಗೇಟ್ ಮುಂತಾದ ಕಡೆಗಳಲ್ಲಿ ಅಶ್ವತ್ಥಮ್ಮ ಅವರು ಕಾಣ ಸಿಗುತ್ತಾರೆ. ಈ ವರೆಗೆ ಭಿಕ್ಷೆ ಬೇಡಿ ಬಂದಿರುವ ಹಣದಲ್ಲಿ ಅಂದಾಜು ₹10 ಲಕ್ಷಕ್ಕೂ ಹೆಚ್ಚು ಹಣವನ್ನು ವಿವಿಧ ದೇವಸ್ಥಾನಗಳಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.
ಪಿಗ್ಮಿಯ ಮೂಲಕ ಹಣ ಉಳಿತಾಯ:
ಪ್ರತಿ ದಿನ ಭಿಕ್ಷೆಯಿಂದ ಸಂಗ್ರಹವಾದ ಹಣದಲ್ಲಿ ತಮ್ಮ ಖರ್ಚಿಗೆ ಎಷ್ಟು ಬೇಕೋ ಅಷ್ಟು ಕನಿಷ್ಠ ಮೊತ್ತವನ್ನು ಇಟ್ಟುಕೊಂಡು ಉಳಿದ ಹಣವನ್ನು ಪಿಗ್ಮಿ ಮೂಲಕ ಕೂಡಿಡುವ ಅವರು ಅದು ಲಕ್ಷದ ಗಡಿ ದಾಟಿದ ಬಳಿಕ ದೇವಸ್ಥಾನಗಳಿಗೆ ತೆರಳಿ ಅನ್ನ ದಾನಕ್ಕೆಂದು ದೇಣಿಗೆ ನೀಡುತ್ತಾರೆ.
ಕೇರಳದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಯ ಪಂಪಾ ಕ್ಷೇತ್ರ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಅವರು ಹೀಗೆ ದೇಣಿಗೆ ನೀಡಿದ್ದಾರೆ. ಮೊದಲು ₹1 ಲಕ್ಷ ಸಾಲಿಗ್ರಾಮದ ದೇಗುಲಕ್ಕೆ ನೀಡಿದ್ದ ಅವರು, ಕೊರೊನಾ ಸಂದರ್ಭದಲ್ಲಿ ಅಯ್ಯಪ್ಪ ವ್ರತಧಾರಿಣಿಯಾಗಿ ಶಬರಿಮಲೆ ಸನ್ನಿಧಾನಕ್ಕೆ ಹೋಗಿದ್ದಾಗ, ಎರಿಮಲೆ ಪಂಪಾ ಸನ್ನಿಧಾನದಲ್ಲಿ ಅನ್ನದಾನಕ್ಕೆಂದು ₹1.5 ಲಕ್ಷ ದೇಣಿಗೆ ನೀಡಿದ್ದಾರೆ. ನಂತರದ ದಿನಗಳಲ್ಲಿ ಗಂಗೊಳ್ಳಿ, ಕಂಚುಗೋಡು, ಕುಂಭಾಸಿ, ಪೊಳಲಿ, ಮುಲ್ಕಿ ಬಪ್ಪನಾಡು, ಮಂಗಳಾದೇವಿ ದೇವಸ್ಥಾನಗಳಿಗೆ ದೇಣಿಗೆ ನೀಡಿದ್ದಾರೆ ಹಾಗೂ ಕುಂದಾಪುರದ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ₹1.16 ಲಕ್ಷ ದಾನವಾಗಿ ನೀಡುವ ಮೂಲಕ ಅಶ್ವತ್ಥಮ್ಮ ಮತ್ತೆ ಗಮನ ಸೆಳೆದಿದ್ದಾರೆ. ದೇವಸ್ಥಾನಗಳಿಗೆ ಹಣ ನೀಡುವ ಕುರಿತು ಅವರಲ್ಲಿ ಕೇಳಿದರೆ, ‘ಎಷ್ಟು ಕಡೆಗೆ ಕೊಟ್ಟಿದ್ದೇನೆ ಎನ್ನುವ ಲೆಕ್ಕ ಇಟ್ಟುಕೊಂಡಿಲ್ಲ. ಕೊಟ್ಟಿರುವುದು ಎಷ್ಟು ಎನ್ನುವುದು ಮುಖ್ಯವಲ್ಲ. ನನ್ನ ಖರ್ಚಿಗಾಗಿ ಇಟ್ಟುಕೊಂಡು ಉಳಿದದ್ದು ಅನ್ನದಾನಕ್ಕೆ ಬಳಕೆಯಾಗುತ್ತದೆಯಲ್ಲ ಎನ್ನುವ ಸಂತೃಪ್ತಿ ಇದೆ’ ಎನ್ನುತ್ತಾರೆ.
ಅವರು ನೀಡುತ್ತಿರುವ ಈ ವಿಶಿಷ್ಠ ಸೇವೆಗಾಗಿ, ದಾನ ನೀಡಿರುವ ದೇವಸ್ಥಾನಗಳಿಂದ ಗೌರವಾರ್ಪಣೆಗೂ ಭಾಜನರಾಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.