



ವಿದ್ಯಾಗಿರಿ: ಸಂದರ್ಶನದ ಸಂದರ್ಭದಲ್ಲಿ ಸಂವಹನ ಮಾತ್ರವಲ್ಲ, ಜ್ಞಾನದ ಜೊತೆ ಹಾವಭಾವ, ನಡವಳಿಕೆ, ಕೌಶಲಗಳೂ ನಮ್ಮನ್ನು ನಿರೂಪಿಸುತ್ತವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ರಾಜ್ಯ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉದ್ಯಮಶೀಲತಾ ಅಭಿವೃದ್ಧಿ ಘಟಕ ಹಾಗೂ ರೂಬಿಕಾನ್ ಸ್ಕಿಲ್ ಡೆವೆಲಪ್‌ಮೆಂಟ್ ಪ್ರೈಲಿ . ಸಹಯೋಗದಲ್ಲಿ ಆಳ್ವಾಸ್ ಕಾಲೇಜು ಉದ್ಯಮಶೀಲತಾ ಅಭಿವೃದ್ಧಿ ಘಟಕ, ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ನಾಲ್ಕು ದಿನಗಳ ‘ಜೀವನ ಕೌಶಲ ತರಬೇತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ನಿಮ್ಮ ಅರ್ಹತೆಯ ಜೊತೆಗೆ ನೀವು ಉದ್ಯೋಗ ನಿರ್ವಹಿಸಲು ಇಚ್ಛಿಸುವ ಉದ್ದೇಶ, ಉತ್ಸಾಹವೂ ಬಹುಮುಖ್ಯ. ನಿಮ್ಮ ಬಯೋಡೆಟಾ (ರೆಸ್ಯೂಮ್) ಕೇವಲ ಪದವಿಗಳನ್ನು ಮಾತ್ರ ಹೊಂದಿರಬಾರದು. ಅದರೊಂದಿಗೆ ನಿಮ್ಮ ಸಾಮರ್ಥ್ಯ, ಸಂವಹನ, ಕೌಶಲಗಳು ಇರಬೇಕು. ಆಗ ನಿಮ್ಮ ಮೌಲ್ಯ ಹೆಚ್ಚುತ್ತದೆ ಎಂದರು.
ನಮ್ಮೊಳಗಿನ ಶಕ್ತಿಯನ್ನು ನಾವು ಮೊದಲು ಅರಿಯಬೇಕು. ಸ್ವಯಂ ಸಾಮರ್ಥ್ಯ ಆಧಾರದಲ್ಲಿ ಮುನ್ನಡೆಯಬೇಕು. ಆಗ ಯಶಸ್ಸು ಸಾಧ್ಯ ಎಂದರು.
ರೂಬಿಕಾನ್ ಸ್ಕಿಲ್ ಡೆವೆಲಪ್‌ಮೆಂಟ್ ಕಂಪೆನಿ ಪ್ರತಿನಿಧಿ, ಕೌಶಲ ತರಬೇತುದಾರ ಜಾಕೀರ್ ಹುಸೈನ್ ಪ್ರೋತ್ಸಾಹಕ ನುಡಿಗಳನ್ನಾಡಿದರು. ‘ನವೆಂಬರ್ ೨೫ರ ವರೆಗೆ ತರಬೇತಿ ನಡೆಯಲಿದ್ದು, ನಾಲ್ಕು ತಂಡಗಳ ಮೂಲಕ ತರಬೇತುದಾರರು ತರಬೇತಿ ನೀಡಲಿದ್ದಾರೆ’ ಎಂದು ಆಳ್ವಾಸ್ ಕಾಲೇಜು ಉದ್ಯಮಶೀಲತಾ ಅಭಿವೃದ್ಧಿ ಘಟಕದ ಸಂಯೋಜಕ ಶಾಜಿಯಾ ಖಾನೂಮ್ ತಿಳಿಸಿದರು.
ಝಾಕಿರ್ ಹುಸೇನ್, ಸುಜಾತ ಕುಮಾರಿ, ಅಬ್ದುಲ್ ಇನಾಮ್ದಾರ್, ಮೋನಿದೀಪಾ ದತ್ತಾ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೌಶಲ ಸಂಯೋಜಕ ರೋಹಿತ್ ಎ.ಆರ್. ಇದ್ದರು. ಪವಿತ್ರಾತೇಜ್ ನಿರೂಪಿಸಿ, ಸಾನಿಧ್ಯಾ ಪ್ರಾರ್ಥಿಸಿ, ಅನ್ಸಿಯಾ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.