



ಕೋಟ:
ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ನಿರ್ವಾಹಕನೋರ್ವ ಟಿಕೆಟ್ ಚೆಕ್ಕಿಂಗ್ ಮಾಡುವ ವ್ಯಕ್ತಿಗೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ಕೋಟ ಸಾಲಿಗ್ರಾಮ ಬಸ್‌ಸ್ಟ್ಯಾಂಡ್ ಬಳಿ ಆ.5ರಂದು ಸಂಜೆ ನಡೆದಿದೆ. ಮೂಲತಃ ಕೊಪ್ಪಳ ಜಿಲ್ಲೆಯ ಹನುಮಸಾಗರ ನಿವಾಸಿ 26ವರ್ಷದ ದುರ್ಗಪ್ಪ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ದುರ್ಗಪ್ಪ ಸಿ.ಸಿ.ಟಿ. ಕಂಪೆನಿಯಲ್ಲಿ ಟಿಕೆಟ್ ಚೆಕ್ಕಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಇವರು ದುರ್ಗಾಂಬ ಬಸ್ಸಿನಲ್ಲಿ ಟಿಕೆಟ್ ಚೆಕ್ಕಿಂಗ್ ಮಾಡುವಾಗ ಬಸ್ ನಿರ್ವಾಹಕ ದಿಲೀಪ್ ಇಬ್ಬರು ಪ್ರಯಾಣಿಕರಿಗೆ ಟಿಕೆಟ್ ನೀಡಿರಲಿಲ್ಲ. ಈ ಬಗ್ಗೆ ಪೋನಿನಲ್ಲಿ ಕಚೇರಿಗೆ ದೂರು ನೀಡಿದ್ದರು. ಅದರಂತೆ ಕಂಪೆನಿ ದಿಲೀಪ್ ನನ್ನು ಕೆಲಸದಿಂದ ವಜಾಗೊಳಿಸಿತ್ತು. ಇದೇ ವಿಚಾರದಲ್ಲಿ ಕೋಪಿತಗೊಂಡ ದಿಲೀಪ್, ಅಂದು ಸಂಜೆ 4ಗಂಟೆಗೆ ಸಾಲಿಗ್ರಾಮ ಬಸ್‌ಸ್ಟಾಂಡ್ ಬಳಿ ಗುರು, ಪವನ ಎಂಬವರನ್ನು ಕರೆದುಕೊಂಡು ಬಂದು, ಬಸ್‌ಸ್ಟಾಂಡ್ ಬಳಿ ನಿಂತಿದ್ದ ದುರ್ಗಪ್ಪನವರನ್ನು ತಡೆದು ನಿಲ್ಲಿಸಿ, ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.