



ಮಂಗಳೂರು: ನಗರದ ಫರಂಗಿಪೇಟೆ ಬಳಿಯ ಅರ್ಕುಳ ಕ್ರಾಸ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದೆ.ಈ ಆಕ್ಸಿಡೆಂಟ್ ಸ್ಪಾಟ್ ನಲ್ಲಿ ಇತ್ತೀಚೆಗೆ ನಡೆದ ಸತತ ಅಪಘಾತಗಳಿಂದ ಕಂಗೆಟ್ಟ ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮೃತರನ್ನು ಅರ್ಕುಳದ ಅಬ್ಬೆಟ್ಟು ನಿವಾಸಿ ಚರಣ್ ರಾಜ್ (34) ಎಂದು ತಿಳಿಯಲಾಗಿದೆ. ಚರಣ್ ಬೆಳಗ್ಗೆ ಅಡ್ಯಾರಿಗೆಂದು ಬರುತ್ತಿದ್ದಾಗ ಅರ್ಕುಳ ಕ್ರಾಸ್ ನಲ್ಲಿ ಹೆದ್ದಾರಿಗೆ ತಿರುವು ಪಡೆಯುತ್ತಿದ್ದಾಗಲೇ ಮಂಗಳೂರಿನಿಂದ ಪುತ್ತೂರಿನತ್ತ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಅರ್ಕುಳ ಕ್ರಾಸ್ ನಲ್ಲಿ ನಿರಂತರ ಅಪಘಾತ ಆಗುತ್ತಿರುವುದರಿಂದ ಬ್ಯಾರಿಕೇಡ್ ಹಾಕಲಾಗಿದೆ. ಭಾನುವಾರ ಆಗಿದ್ದರಿಂದ ಹೆದ್ದಾರಿಯಲ್ಲಿ ವಾಹನ ಕಡಿಮೆ ಇದ್ದುದರಿಂದ ಬಸ್ ಅತಿ ವೇಗದಿಂದ ಧಾವಿಸಿ ಬಂದಿತ್ತು. ಇದೇ ವೇಳೆ, ಸವಾರ ಹೆದ್ದಾರಿ ಕ್ರಾಸ್ ಮಾಡಲು ರಸ್ತೆಯ ಮಧ್ಯಕ್ಕೆ ಬಂದಿದ್ದು, ಬಸ್ ನೇರವಾಗಿ ಬೈಕಿಗೆ ಢಿಕ್ಕಿಯಾಗಿದೆ. ಇದರಿಂದ ಸಿಟ್ಟುಗೊಂಡ ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಆಗಿದ್ದು, ಎರಡು ಕಡೆಯಲ್ಲೂ ನಾಲ್ಕೈದು ಕಿಮೀ ಉದ್ದಕ್ಕೆ ಬ್ಲಾಕ್ ಆಗಿತ್ತು. ಅರ್ಕುಳ ಹೆದ್ದಾರಿ ಕ್ರಾಸ್ ಮಾಡುವ ಸ್ಥಳದಲ್ಲಿ ಯಮರಾಯನೇ ಅವಿತು ಕುಳಿತಿರುವಂತಿದೆ. ಹೆದ್ದಾರಿಯ ಅವೈಜ್ಞಾನಿಕ ತಿರುವುನಿಂದಾಗಿ ಸರಣಿಯಾಗಿ ಅಪಘಾತ ನಡೆಯುತ್ತಿದ್ದು, ಕಳೆದ ನಾಲ್ಕೈದು ವರ್ಷದಲ್ಲಿ ಕನಿಷ್ಠ 10ಕ್ಕೂ ಅಧಿಕ ಮಂದಿ ಇದೇ ಸ್ಥಳದಲ್ಲಿ ಸಾವು ಕಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.