


ಮಂಗಳೂರು: ಮಂಗಳೂರು ಮತ್ತು ಉಡುಪಿಯಿಂದ ವಿವಿಧ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ದಸರಾ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಅಕ್ಟೋಬರ್ 25ರವರೆಗೆ ವಿಸ್ತರಿಸಿದೆ.
ಮಂಗಳೂರು ಪ್ಯಾಕೇಜ್:
ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ‘ದಸರಾ ನವದುರ್ಗಾ ದರ್ಶನ’ ಬಸ್ ಮರೋಳಿಯ ಸೂರ್ಯನಾರಾಯಣ ದೇವಾಲಯ, ಬೋಳಾರದ ಮಾರಿಯಮ್ಮ ದೇವಾಲಯ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ, ಚಿತ್ರಾಪುರ ದುರ್ಗಾಪರಮೇಶ್ವರಿ, ಉರ್ವ ಮರಿಯಮ್ಮ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಗಳಿಗೆ ಭೇಟಿ ನೀಡಲಿದೆ. ರಾತ್ರಿ 8.30ಕ್ಕೆ ಮಂಗಳೂರಿಗೆ ಹಿಂತಿರುಗಲಿದೆ.
ಈ ಪ್ಯಾಕೇಜ್‌ನಲ್ಲಿ ಹಿರಿಯರಿಗೆ ₹500 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ₹400 ಪ್ರಯಾಣ ದರ ನಿಗದಿಪಡಿಸಲಾಗಿದೆ.
ಉಡುಪಿ ಪ್ಯಾಕೇಜ್‌ಗಳು:
ಉಡುಪಿಯಿಂದ ಎರಡು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ. ಮೊದಲನೇ ಪ್ಯಾಕೇಜ್‌ನಲ್ಲಿ ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಶಾರದಾಂಬೆ ದೇವಾಲಯ, ಕಿಗ್ಗದ ಋಷ್ಯಶೃಂಗೇಶ್ವರ ದೇವಾಲಯ, ಹರಿಹರಪುರ ಮಠ ಹಾಗೂ ಪೆರ್ಡೂರು ಅನಂತ ಪದ್ಮನಾಭ ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ಬೆಳಗ್ಗೆ 7.30ಕ್ಕೆ ಹೊರಡುವ ಬಸ್ ರಾತ್ರಿ 8 ಗಂಟೆಗೆ ವಾಪಸಾಗಲಿದೆ.
ಎರಡನೇ ಪ್ಯಾಕೇಜ್‌ನಲ್ಲಿ ನೀಲಾವರ ಮಹಿಷಮರ್ದಿನಿ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ, ಸೌಕೂರು ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ಈ ಬಸ್ ಸಂಜೆ 6.30ಕ್ಕೆ ಉಡುಪಿಗೆ ಹಿಂತಿರುಗಲಿದೆ.
ಉಡುಪಿಯ ಎರಡೂ ಪ್ಯಾಕೇಜ್‌ಗಳಿಗೆ ಹಿರಿಯರಿಗೆ ₹500 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ₹400 ದರ ನಿಗದಿಪಡಿಸಲಾಗಿದೆ.
ಈ ವಿಶೇಷ ಪ್ರವಾಸಗಳಿಗೆ ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಬಹುದು ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.