



ವರದಿ: ಹರಿಪ್ರಸಾದ್ ನಂದಳಿಕೆ
ಕುಂದಾಪುರ: ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಬೃಹತ್ ಶಿಲಾಯುಗ ಕಾಲದ ನಿಲ್ಸ್‌ಕಲ್ ಪತ್ತೆಯಾಗಿದೆಯೆಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಪ್ರೊ. ಟಿ. ಮುರುಗೇಶಿಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಸುಭಾಷ್ ನಗರ, ಅಡ್ಕದಕಟ್ಟೆ ಮತ್ತು ಕೊಲ್ಲೂರುಗಳಲ್ಲಿ ಈಗಾಗಲೇ ನಿಲ್ಸ್‌ಕಲ್‌ಗಳು ಪತ್ತೆಯಾಗಿವೆ. ಆದರೆ, ಬಸ್ರೂರಿನ ನಿಲ್ಸ್‌ಕಲ್ ತನ್ನ ವಿಶಿಷ್ಟ ವಿನ್ಯಾಸದಿಂದಾಗಿ ಕಣ್ಮನ ಸೆಳೆಯುತ್ತದೆ. ಗರ್ಭಿಣಿ ಸ್ತ್ರೀಯ ದೇಹದ ಬಾಗು-ಬಳುಕುಗಳಂತೆ ಈ ನಿಲ್ಸ್‌ಕಲ್‌ನ್ನು ವಿನ್ಯಾಸಗೊಳಿಸಲಾಗಿದೆ. ಕರಾವಳಿಯ ನಿಲ್ಸ್‌ಕಲ್‌ಗಳನ್ನು ಸ್ಥಳೀಯ ದಂಥಕತೆಗಳಲ್ಲಿ ಗರ್ಭಿಣಿ ಕಲ್ಲುಗಳೆಂದೇ ಕರೆಯಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಪುರಾತತ್ವ ಆಧಾರಗಳು ಲಭ್ಯವಿಲ್ಲ.
ನಿಲ್ಸ್‌ಕಲ್ ಎಂದರೆ : ಭೂಮಿಯ ಮೇಲೆ ಲಂಭವಾಗಿ, ಸ್ವಲ್ಪ ವಾಲಿ ನಿಂತತೆ ಬೃಹತ್ ಶಿಲಾಯುಗದ ಸಮಾಧಿಯ ಮೇಲೆ ಅಥವಾ ಸಮಾಧಿಗಳ ಸಮೀಪದಲ್ಲಿ ಮೃತರ ಸ್ಮರಣಾರ್ಥವಾಗಿ ನಿಲ್ಲಿಸಿರುವ ಒರಟಾದ ಬೃಹತ್ ಶಿಲೆಗಳನ್ನು ನಿಂತಿಕಲ್ಲು, ನಿಲ್ಸ್‌ಕಲ್ಲು, ಗರ್ಭಿಣಿಕಲ್ಲು, ಆನೆಕಲ್ಲು, ರಕ್ಕಸಕಲ್ಲು ಮುಂತಾದ ಹೆಸರುಗಳಿಂದ ಸ್ಥಳೀಯ ಜನರು ಇವುಗಳನ್ನು ಗುರುತಿಸುತ್ತಾರೆ. ದಕ್ಷಿಣ ಭಾರತದೆಲ್ಲೆಡೆ ಇಂತಹ ಕಲ್ಲುಗಳು ಕಂಡುಬರುತ್ತವೆ.
ಬಸ್ರೂರಿನ ನಿಲ್ಸ್‌ಕಲ್: ಬಸ್ಸೂರಿನ ನಿಲ್ಸ್‌ಕಲ್ ಸುಮಾರು ಏಳು ಅಡಿ ಎತ್ತರವಿದೆ. ವಾಯುವ್ಯ ದಿಕ್ಕಿಗೆ ಮುಖ ಮಾಡಿ ನಿಂತಿರುವ ಈ ಕಲ್ಲು, ಪೂರ್ವಕ್ಕೆ ಸ್ವಲ್ಪ ವಾಲಿದಂತೆ ನಿಲ್ಲಿಸಲ್ಪಟ್ಟಿದೆ. ಬಸ್ರೂರನ್ನು ಶಾಸನಗಳಲ್ಲಿ ಬಸುರೆಪಟ್ಟಣ, ಬಸುರೆನಗರ, ಬಸ್ರೂರು, ವಸುಪುರ ಎಂದು ಕರೆಯಲಾಗಿದೆ. ಕನ್ನಡ ಭಾಷೆಯಲ್ಲಿ ಬಸಿರು, ಬಸುರೆ ಎಂದರೆ ಗರ್ಭಿಣಿ ಎಂದೇ ಅರ್ಥವಿದೆ. ವಸುಪುರ ಎಂಬ ಸಂಸ್ಕೃತ ಪದದಲ್ಲಿನ ವಸು ಎಂಬ ಅರ್ಥವೂ ಭೂಮಿ ಎಂದೇ ಅರ್ಥ. ಭೂಮಿ ಎಂದರೆ ಹೆಣ್ಣೆ ತಾನೇ? ಆದ್ದರಿಂದ ಬಸ್ರೂರಿನ ನಿಲ್ಸ್‌ಕಲ್ ಗೂ ಹೆಣ್ಣಿಗೂ ನಿಕಟ ಸಂಬಂಧವಿದೆ. ಬಸ್ರೂರಿನ ಈ ವಿಶಿಷ್ಟ ನಿಲ್ಸ್‌ಕಲ್ ಸಂಶೋಧನೆ, ಬಸ್ರೂರಿನ ಪ್ರಾಚೀನತೆಯನ್ನು ಕನಿಷ್ಠ ಕ್ರಿ.ಪೂ. 1000 ವರ್ಷಗಳ ಪ್ರಾಚೀನತೆಗೆ ತೆಗೆದುಕೊಂಡು ಹೋಗುತ್ತದೆ. ಈ ನಿಲ್ಸ್‌ಕಲ್ಲು ಬಸ್ರೂರಿನ ವೆಂಕಟರಮಣ ದೇವಾಲಯ ಮತ್ತು ಕೋಟೆ ಆಂಜನೇಯ ದೇವಾಲಯಗಳ ನಡುವಿನಲ್ಲಿದೆ. ಮುರುಳೀಧರ ಹೆಗಡೆ, ಬಸ್ರೂರಿನ ಪ್ರದೀಪ್, ವಿದ್ಯಾರ್ಥಿ ಶ್ರೇಯಸ್, ನಾಗರಾಜ್, ಗೌತಮ್, ಚಂದ್ರು ಮತ್ತು ಕಾರ್ತಿಕ್ ಹಾಗೂ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿ ಅಧ್ಯಯನದಲ್ಲಿ ಸಹಕರಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.