



ಉಡುಪಿ:
ಜಿಲ್ಲೆಯಲ್ಲಿ ರಸ್ತೆಯ ದುರಾವಸ್ಥೆಯಿಂದ ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ. ಆದರೆ, ಹೆದ್ದಾರಿಯನ್ನು ದುರಸ್ತಿ ಮಾಡಬೇಕಾದ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಅಡಗಿ ಕುಳಿತಿದ್ದಾರೆ. ನಮ್ಮ ಸಂಸದೆಯನ್ನು ಹುಡುಕಿಕೊಡಿಯೆಂದು ಪೊಲೀಸ್ ಠಾಣೆಗೆ ದೂರು ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಟೀಕಿಸಿದರು. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸುವಂತೆ ಆಗ್ರಹಿಸಿ ಹಾಗೂ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಗರದಲ್ಲಿ ಇಂದು ಹಮ್ಮಿಕೊಳ್ಳಲಾದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ನಮ್ಮ ಸಂಸದೆಗೆ ಸತ್ತವರ ಧರ್ಮ ನೋಡಿ ರಾಜಕೀಯ ಮಾಡುವುದು ಬಿಟ್ಟರೆ, ಜನರ ಸಮಸ್ಯೆ ಆಲಿಸುವ ಸೌಜನ್ಯ ಕೂಡ ಇಲ್ಲ. ನಾವು ಏನು ಅನ್ಯಾಯ ಮಾಡಿದ್ದೇವೆ. ನಾವೇನಾದರೂ ಪಾಕಿಸ್ತಾನದಲ್ಲಿ ಇದ್ದೇವಾ ಎಂದು ಪ್ರಶ್ನಿಸಿದರು. 40 ಪರ್ಸೆಂಟ್ ಕಮಿಷನ್, 70ಪರ್ಸೆಂಟ್ ಬೆಲೆ ಏರಿಕೆ, ನಿರುದ್ಯೋಗ ಬಿಜೆಪಿ ಸರ್ಕಾರದ ಕೊಡುಗೆ. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತತೆಯನ್ನು ಕಿತ್ತು ಹಾಕುವ ಹುನ್ನಾರ ದೇಶಾದ್ಯಂತ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ವಲಯದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ಮುಖಂಡರಾದ ಚರಣ್ ವಿಠ್ಠಲ್ ಕುದಿ, ಇಸ್ಮಾಯಿಲ್ ಆತ್ರಾಡಿ, ಶಶಿಧರ್ ಜತನ್ನ, ಉಮೇಶ್ ಕಾಂಚನ್, ಲಕ್ಷ್ಮೀ ನಾರಾಯಣ ಪ್ರಭು, ಗುರುದಾಸ್ ಭಂಡಾರಿ, ದಿಲೀಪ್ ಹೆಗ್ಡೆ, ಕಿರಣ್ ಹೆಗ್ಡೆ, ಸಂತೋಷ್ ಶೆಟ್ಟಿ, ಸೌರಭ್ ಭಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.