logo
WhatsApp Image 2026-04-02 at 14.46.04.jpeg
hindalco everlast.jpeg

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಕೇಸ್, ಪೊಲೀಸರ ಬಲೆಗೆ ಬಿದ್ದರು ಮೂವರು ಆರೋಪಿಗಳು

ಟ್ರೆಂಡಿಂಗ್
share whatsappshare facebookshare telegram
8 Aug 2026
post image

ಉಡುಪಿ : ಮುದರಂಗಡಿಯಲ್ಲಿ ಉದ್ಯಮಿ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ (55) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಗಸ್ಟ್ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಕಾಪು ತಾಲ್ಲೂಕಿನ ಮುದರಂಗಡಿಯ ಸೆಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್ ಕಚೇರಿಗೆ ಡೇವಿಡ್ ಡಿಸೋಜಾ ಬಂದಿದ್ದರು. ಬಳಿಕ ತಮ್ಮ ಥಾರ್ ವಾಹನದ ಚಾಲಕನ ಬದಿಯ ಬಾಗಿಲಿನ ಬಳಿ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು.

ತಲೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಡೇವಿಡ್ ಡಿಸೋಜಾ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಬಸ್‌ನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳು:

ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್‌ನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಬೈಂದೂರಿನ ಒತ್ತಿನಾಣೆ ಬಳಿ ಬಸ್ ತಡೆದು ಪೊಲೀಸರು ಪರಿಶೀಲನೆ ನಡೆಸಿದರು.

ಈ ವೇಳೆ ಆರೋಪಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಬೆನ್ನಟ್ಟಿದಾಗ ರಾಜು (42), ಉತ್ತರ ಪ್ರದೇಶದ ಥಾಣಾ ಪಿಲ್ವ ನಿವಾಸಿ, ಕಾಪು ಠಾಣೆಯ ಪಿಎಸ್‌ಐ ತೇಜಸ್ವಿ ಅವರನ್ನು ದೂಡಿ, ಪಿಸ್ತೂಲ್‌ನಿಂದ ಪೊಲೀಸರತ್ತ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಆತ್ಮರಕ್ಷಣೆಗಾಗಿ ಪೊಲೀಸರು ರಾಜು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆತನ ಬಳಿಯಿದ್ದ ಪಿಸ್ತೂಲ್‌ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಪಿಎಸ್‌ಐ ತೇಜಸ್ವಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಾಜು ಕೂಡ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪರಾರಿಯಾಗಿದ್ದ ಮತ್ತಿಬ್ಬರು ಆರೋಪಿಗಳಾದ ಉತ್ತರಾಖಂಡದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23) ಹಾಗೂ ಬಿಹಾರದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಮಟಾ ಪೊಲೀಸರ ಸಹಕಾರದಿಂದ ಅನ್ಮೋಲ್‌ನನ್ನು ಕುಮಟಾದಲ್ಲಿ ಹಾಗೂ ಭಟ್ಕಳ ಪೊಲೀಸರ ಸಹಕಾರದಿಂದ ದೀಪಕ್‌ನನ್ನು ಭಟ್ಕಳದಲ್ಲಿ ಶನಿವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿದೆ.

ಹಣಕಾಸಿನ ವೈಮನಸ್ಸೇ ಹತ್ಯೆಗೆ ಕಾರಣ?

ಡೇವಿಡ್ ಡಿಸೋಜಾ ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪನಿಯೊಂದರೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರನ್ನು ಹತ್ಯೆ ಮಾಡಲು ಸುಪಾರಿ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಸಹಕರಿಸಿದವರು, ಹಣಕಾಸಿನ ನೆರವು ನೀಡಿದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹತ್ಯೆಗೆ ಆರೋಪಿಗಳು ಬಳಸಿದ್ದ ಬೈಕ್ ಅನ್ನು ಎರ್ಮಾಳ್‌ನಲ್ಲಿ ಬಿಟ್ಟು ಹೋಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಹತ್ಯೆಯ ಹಿಂದಿರುವ ಸಂಪೂರ್ಣ ಜಾಲದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ಅಝ್ಮತ್ ಆಲಿ ಜಿ., ಡಿಎಸ್‌ಬಿ ವಿಭಾಗದ ಪಿಐ ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ವಿವಿಧ ಠಾಣೆಗಳ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಭಟ್ಕಳ ಮತ್ತು ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾ ತಂಡ, ಬೆರಳಚ್ಚು, ಶ್ವಾನದಳ ಹಾಗೂ ಸಿಡಿಆರ್ ಸೆಲ್ ತಂಡಗಳು ಕಾರ್ಯಾಚರಣೆಗೆ ಸಹಕರಿಸಿವೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.