


ಕಾರ್ಕಳ: ಶುದ್ಧ ಗಾಳಿ, ನೀರು ಮತ್ತು ಬೆಳಕು ನಮ್ಮ ಬದುಕಿಗೆ ಅತ್ಯವಶ್ಯ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೊ. ಶ್ರೀಧರ್ ಕರೆ ನೀಡಿದರು.
ಮುರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು, ಮಿಯಾರು, ಕಾರ್ಕಳದಲ್ಲಿ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ ‘ಧನ್ಯವಾದ್–ವೃಕ್ಷ ಸಂವರ್ಧನಾ ಯೋಜನೆ’ಯಡಿ 100ಕ್ಕೂ ಹೆಚ್ಚು ವಿವಿಧ ಪ್ರಭೇದಗಳ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರೊ. ಶ್ರೀಧರ್, ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು. ಪ್ರಕೃತಿ ಸಂಪತ್ತನ್ನು ಉಳಿಸುವುದು ಇಂದಿನ ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್‌ನ ಮಾರ್ಗದರ್ಶಕರು ಹಾಗೂ ‘ಧನ್ಯವಾದ್–ವೃಕ್ಷ ಸಂವರ್ಧನಾ ಯೋಜನೆ’ಯ ರೋಟರಿ ಜಿಲ್ಲಾ ಅಧ್ಯಕ್ಷರೂ ಆಗಿರುವ ಮಾಜಿ ಜಿಲ್ಲಾ ಗವರ್ನರ್ ರೊ. ಡಾ. ಭರತೇಶ್ ಆದಿರಾಜ್ ಮಾತನಾಡಿ, ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿಯ ಧ್ಯೇಯೋದ್ದೇಶಗಳಲ್ಲಿ ಪರಿಸರ ಸಂರಕ್ಷಣೆಯೂ ಪ್ರಮುಖವಾದುದು. ಇದರ ಭಾಗವಾಗಿ ‘ಧನ್ಯವಾದ್’ ಯೋಜನೆಯಡಿ ಕೈಗೊಂಡಿರುವ ವೃಕ್ಷ ಸಂವರ್ಧನಾ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು.
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಅಧ್ಯಕ್ಷ ರೊ. ಮಂಜುನಾಥ ಹೆಗ್ಡೆ ಗಣ್ಯರನ್ನು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಶ್ರೀ ಮಲ್ಲಿಕಾರ್ಜುನ ಕುರಿ ಮಾತನಾಡಿ, ರೋಟರಿ ಸಂಸ್ಥೆಯ ಪರಿಸರಪರ ಚಟುವಟಿಕೆಗಳ ಬಗ್ಗೆ ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿದರು. ತಮ್ಮ ಸಂಸ್ಥೆಯನ್ನು ಇಂತಹ ಮಹತ್ವದ ಯೋಜನೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ರೋಟರಿ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು.
ಕಾಲೇಜಿನ ವಿದ್ಯಾರ್ಥಿನಿಯರು ‘ವಂದೇ ಮಾತರಂ’ ಹಾಗೂ ರಾಷ್ಟ್ರಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಬಳಿಕ ಅತಿಥಿಗಳು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಉಪನ್ಯಾಸಕ ವೃಂದದ ಮೇಲ್ವಿಚಾರಣೆ ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ವೃಕ್ಷಾರೋಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ರೊ. ಸುರೇಂದ್ರ ನಾಯಕ್, ಪೂರ್ವಾಧ್ಯಕ್ಷರಾದ ರೊ. ಸುರೇಶ್ ನಾಯಕ್, ರೊ. ಉಪೇಂದ್ರ ವಾಗ್ಲೆ, ಕೋಶಾಧಿಕಾರಿ ರೊ. ಪ್ರಶಾಂತ್ ಜೈನ್, ರೊ. ರಮೇಶ್ ಶೆಟ್ಟಿ, ಆನ್ಸ್ ಅಧ್ಯಕ್ಷೆ ಶರ್ಮಿಳಾ ಶೆಟ್ಟಿ, ಆನೆಟ್ ಸೃಷ್ಟಿ ಆರ್. ಶೆಟ್ಟಿ, ರೊ. ಫೆಲಿಕ್ಸ್ ವಾಜ್, ರೊ. ಅಬ್ದುಲ್ ರಹೆಮಾನ್ ಹಾಗೂ ರೊ. ಪ್ರಕಾಶ್ ವಾಗ್ಲೆ ಉಪಸ್ಥಿತರಿದ್ದರು.
ರೊ. ಸುಜಯ್ ಅವರು ತಮ್ಮ ಜೆಸಿಬಿ ಮೂಲಕ ಗಿಡ ನೆಡುವ ಕಾಮಗಾರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಟ್ಟಿದ್ದು, ಅವರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಕಾಲೇಜಿನ ಉಪನ್ಯಾಸಕಿ ಹಾಗೂ ನಿಲಯ ಪಾಲಕರಾದ ಡಾ. ತುಲಸೀ ಗಾಯತ್ರಿ ದೇವಿ, ಉಪನ್ಯಾಸಕರಾದ ಗುರುರಾಜ್, ಪ್ರವೀಣ್, ಸುಪ್ರೀತಾ ಸೇರಿದಂತೆ ಎಲ್ಲಾ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ರೋಟರಿ ಕ್ಲಬ್‌ನ ಕಾರ್ಯದರ್ಶಿ ಹಾಗೂ ವಿಶ್ರಾಂತ ಪ್ರಾಂಶುಪಾಲ ರೊ. ಗಣೇಶ್ ಬರ್ಲಾಯ ವಂದಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.