



ಕಾರ್ಕಳ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಹಾಗೂ ಉಚಿತ ಶಿಕ್ಷಣದ ಮೂಲಕ ಬದುಕಿಗೆ ಬಲವಾದ ವೇದಿಕೆ ಕಲ್ಪಿಸಬೇಕು ಎಂಬ ಕನಸು ನನ್ನದಾಗಿತ್ತು ಎಂದು ರಾಧನಾಯಕ್ ಸರಕಾರಿ ಪ್ರೌಢಶಾಲೆಯ ಗೌರವಾಧ್ಯಕ್ಷ ದಯಾನಾಯಕ್ ಹೇಳಿದರು. ಅವರು ಕಾರ್ಕಳ ತಾಲೂಕಿನ ಎಣ್ಣೆಹೊಳೆ ಅಮೃತನಗರದಲ್ಲಿರುವ ರಾಧನಾಯಕ್ ಸರಕಾರಿ ಪ್ರೌಢಶಾಲೆಯ 25ನೇ ವರ್ಷದ ‘ಬೆಳ್ಳಿ ಹಬ್ಬ’ದ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ಒಂದು ಕಾಲದಲ್ಲಿ ಊರಿನ ಜನರು ಹಾರೆ, ಪಿಕ್ಕಾಸಿ ಹಿಡಿದು ದುಡಿಮೆ ಮಾಡಲು ಬರುತ್ತಿದ್ದರು. ಆ ಜನರ ಶ್ರಮವೇ ನನ್ನ ಬದುಕಿಗೆ ಪ್ರೇರಣೆಯಾಯಿತು. ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಯ ನನ್ನಲ್ಲಿ ಸದಾ ಇತ್ತು. ಶಿಕ್ಷಣವನ್ನು ಖಾಸಗೀಕರಣಗೊಳಿಸದೆ, ಸರ್ಕಾರಿ ಶಾಲೆಗಳ ಮೂಲಕವೇ ಸಮಾನ ಅವಕಾಶ ಕಲ್ಪಿಸಬೇಕು. ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಮಾತನಾಡಿ, “ಭವಿಷ್ಯವನ್ನು ರೂಪಿಸುವ ವ್ಯಕ್ತಿಯೇ ಸಮಾಜಕ್ಕೆ ಮಾದರಿ. ದಯಾನಾಯಕ್ ಅವರು ಸಾರ್ವಜನಿಕ ಅಭಿನಂದನೆಗೆ ಸಂಪೂರ್ಣ ಅರ್ಹರು. ಉಚಿತ ಶಿಕ್ಷಣ ನೀಡುವ ಮೂಲಕ ಅನೇಕ ಮಕ್ಕಳ ಬದುಕಿಗೆ ಬೆಳಕು ನೀಡಿದ್ದಾರೆ. ಅವರ ನಿಷ್ಠೆ, ಪ್ರಮಾಣಿಕತೆ ಮತ್ತು ಗಟ್ಟಿತನದ ಮೂಲಕ ದೇಶಾದ್ಯಂತ ಪರಿಚಿತರಾಗಿದ್ದಾರೆ” ಎಂದರು. “ಒಂದು ಕಾಲಘಟ್ಟದಲ್ಲಿ ಭೂಗತ ಜಗತ್ತು ದೇಶಕ್ಕೆ ದೊಡ್ಡ ಸವಾಲಾಗಿದ್ದ ಸಂದರ್ಭದಲ್ಲೂ, ಸಕಾರಾತ್ಮಕ ಸಮಾಜ ನಿರ್ಮಾಣದಲ್ಲಿ ದಯಾನಾಯಕ್ ಅವರ ಪಾತ್ರ ಮಹತ್ವದಾಗಿದೆ. ಮುಂಬೈನಲ್ಲಿ ಉದ್ಯೋಗದಲ್ಲಿದ್ದರೂ ಸ್ವಗ್ರಾಮವನ್ನು ಮರೆಯದೆ, ಶಾಲೆ ಕಟ್ಟಿಸಿ ಸರ್ಕಾರ ಮಾಡಬೇಕಾದ ಕೆಲಸವನ್ನು ತಾವೇ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ” ಎಂದು ಶ್ಲಾಘಿಸಿದರು. , “ಇಂದು ಕರ್ನಾಟಕ ಸರ್ಕಾರ ಹಲವೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹಂತಕ್ಕೆ ಬಂದಿದೆ. ಆದರೆ ಇಡೀ ರಾಜ್ಯದಲ್ಲಿ ಇಂತಹ ಸುಂದರ ಹಾಗೂ ಮಾದರಿ ಸರ್ಕಾರಿ ಶಾಲೆ ಅಪರೂಪ. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸುವ ಗುರಿ ನಮ್ಮದು. ದಯಾನಾಯಕ್ ಅವರು ಗ್ರಾಮಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ” ಎಂದು ಭರವಸೆ ನೀಡಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಎಫ್. ಗಪೂರ್ ಮಾತನಾಡಿ, “ಈ ಶಾಲೆಯ ಕಾರಣದಿಂದ ಊರಿಗೆ ರಾಜ್ಯಮಟ್ಟದಲ್ಲಿ ಹೆಸರು ಬಂದಿದೆ. ಇಲ್ಲಿ ಶಿಕ್ಷಕರ ಶಿಸ್ತು, ಗುಣಮಟ್ಟದ ಶಿಕ್ಷಣ, ಶಾಂತಚಿತ್ತದ ಸೇವೆ ಹಾಗೂ ಪೋಷಕರೊಡನೆ ಹೊಂದಾಣಿಕೆಯ ಕಾರ್ಯ ಶ್ಲಾಘನೀಯ. ಕಳೆದ 25 ವರ್ಷಗಳಿಂದ ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ಬೆಳಕು ನೀಡುವ ಮಹತ್ವದ ಶಿಕ್ಷಣ ಕೇಂದ್ರವಾಗಿ ಈ ಶಾಲೆ ಬೆಳೆದಿದೆ” ಎಂದರು. ಸ್ವಗ್ರಾಮದ ಮಕ್ಕಳಿಗೆ ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ದೊರೆಯಬೇಕೆಂಬ ನಿಸ್ವಾರ್ಥ ಕನಸಿನಿಂದ ನಿರ್ಮಿಸಲಾದ ಈ ಶಿಕ್ಷಣ ಸಂಸ್ಥೆ, ಸುಸಜ್ಜಿತ ಕಟ್ಟಡ, ಶಿಸ್ತುಬದ್ಧ ವಾತಾವರಣ ಹಾಗೂ ಪ್ರಕೃತಿ ಆಧಾರಿತ ಶಿಕ್ಷಣಕ್ಕೆ ನೀಡಿರುವ ಒತ್ತುವರಿಯಿಂದ ತನ್ನದೇ ಆದ ವಿಶಿಷ್ಟ ಗುರುತನ್ನು ಪಡೆದಿದೆ. ಪಠ್ಯಕ್ರಮದ ಜೊತೆಗೆ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳ ಮೂಲಕ ಅನೇಕ ವಿದ್ಯಾರ್ಥಿಗಳ ಜೀವನಕ್ಕೆ ದಿಕ್ಕು ನೀಡಿರುವ ಈ ಶಾಲೆ, ಸಮಗ್ರ ವ್ಯಕ್ತಿತ್ವ ವಿಕಾಸದ ನಿಜವಾದ ಪೀಠವಾಗಿ ಬೆಳೆದಿದೆಎಂದರು
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, “ವಿದ್ಯಾದಾನವೇ ಶ್ರೇಷ್ಠ ದಾನ. ಅದರಲ್ಲಿ 25 ವರ್ಷಗಳ ಸೇವೆ ಪೂರ್ಣಗೊಳಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ಶಾಲೆ ಅನೇಕ ಮಕ್ಕಳ ಬದುಕನ್ನು ರೂಪಿಸಿದೆ” ಎಂದು ಹೇಳಿದರು.
ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್ ಮಾತನಾಡಿ, ಶಾಲೆಯ ಸಾಮಾಜಿಕ ಕೊಡುಗೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ರಾಜೇಂದ್ರ ಶೆಟ್ಟಿ, ಅಂಡಾರು ಮಹಾವೀರ ಹೆಗ್ಡೆ, ಸಾಧು ಶೆಟ್ಟಿ, ವೇದಮೂರ್ತಿ ಅರುಣ್ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಶೆಟ್ಟಿ, ಶಾರದ, ರಾಧನಾಯಕ್ ಎಜುಕೇಶನ್ ಟ್ರಸ್ಟ್‌ನ ಶಿವಕುಮಾರ್ ಕುರ್ಪಾಡಿಗುತ್ತು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದೀರ್ ಶೆಟ್ಟಿ, ಮುಖ್ಯೋಪಾಧ್ಯಾಯ ರಾಮದಾಸ ನಾಯಕ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸದಾನಂದ ಸಾಲ್ಯಾನ್ ಕೆರುವಾಶೆ, ಪ್ರೀತಂ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಯಾನಾಯಕ್ ಅವರನ್ನು ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ದಾನಿಗಳಿಂದ ಸನ್ಮಾನಿಸಲಾಯಿತು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ‘ಗುರುವಂದನಾ’ ಕಾರ್ರಕ್ರಮ ನಡೆಯಿತು. ಮುಖ್ಯೋಪಾಧ್ಯಾಯ ರಾಮದಾಸ ನಾಯಕ್ ಶಾಲಾ ವರದಿಯನ್ನು ವಾಚಿಸಿದರು. ರಾಜರಾಂ ಸೇರ್ವೆಗಾರ್ ಸ್ವಾಗತಿಸಿದರು. ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.