logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉದ್ಯೋಗದ ನೆಪವೊಡ್ಡಿ,ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಮಾರಣ ಹೋಮ ಮಾಡಲಾಗುತ್ತಿದೆ.

ಟ್ರೆಂಡಿಂಗ್
share whatsappshare facebookshare telegram
16 Sept 2021
post image

ಹತ್ತು ವರ್ಷಗಳ ಹಿಂದೆ ನಾನು ಹುಬ್ಬಳ್ಳಿಯ ಪತ್ರಿಕೆಯ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳು, ಕರಾವಳಿಯವರಿಗೆ ಆ ಭಾಗದಲ್ಲಿರುವುದು ನಿಜಕ್ಕೂ ವಿಶೇಷ ಅನುಭವ. ದೇಸಿ ಭಾಷೆಯ ಸೊಗಡು,ಉತ್ತರ ಕರ್ನಾಟಕದ ಸಂಸ್ಕೃತಿ, ಆಹಾರ ಪದ್ಧತಿ, ಜನ ಜೀವನ,ಹಬ್ಬ ಆಚರಣೆ ನಿಜಕ್ಕೂ ಅದ್ಭುತ.ನನಗೆ ಅಲ್ಲಿನ ಸಹೋದ್ಯೋಗಿಗಳು ಕ್ರಮೇಣ ಮಿತ್ರರಾದರು.ಕೆಲಸದ ಒತ್ತಡ ಜಾಸ್ತಿಯೇ, ಹೊರತು ಕಡಿಮೆ ಇರಲಿಲ್ಲ, ಊರಿಗೆ ಬರುವುದು ಮೂರನಾಲ್ಕು ತಿಂಗಳಿಗೊಮ್ಮೆ.ಪಕ್ಕದ ಪಟ್ಟಣ,ಮಲೆ ನಾಡ ಹೆಬ್ಬಾಗಿಲು ಶಿರಸಿಯಲ್ಲಿ ಬಾಲ್ಯದ ಗೆಳೆಯನ ಮನೆ ಇರೊದರಿಂದ ಆಗಾಗೆ ಅಲ್ಲಿಗೆ ಹೋಗುತ್ತಿದೆ.

2011 ಅಕ್ಟೋಬರ್ ಮೊದಲ ವಾರಾಂತ್ಯದಲ್ಲಿ ಗೆಳೆಯ ಪ್ರವೀಣ್ ಗೋಖಲೆ ಅಜ್ಜಿ ಮನೆಗೆ ಸೋದರ ಸಂಬಂಧಿಗಳ ಜೊತೆಗೆ ಹೋಗೋದಾಗಿ ಹೇಳಿ ನನ್ನನ್ನು ಕರೆದನು, ಎಲ್ಲಿಗೆ? ಮಾರಾಯ ಎಂದು ಕೇಳಿದಾಗ, ಬೆಳಗಾವಿಯ ಪಕ್ಕಕ್ಕೆ ಇರುವ ಮಹಾರಾಷ್ಟ್ರದ ಸಾವಂತವಾಡಿಯ ಸಮೀಪದ ಹಳ್ಳಿ. ಅಲ್ಲಿ ನಮ್ಮ ತೋಟ,ಹೊಲ ಮತ್ತು ಹಳೆಯ ಫಾರ್ಮ್ ಹೌಸ್ ಇದೆ.ಕೆಲಸದವರ ಜೊತೆ ಪರಿಚಿತ ದಂಪತಿಗಳು ಅವೆಲ್ಲವನ್ನು ನೋಡಿಕೊಳ್ಳುವುದು. ನಮ್ಮವರು ಪುಣೆ, ಮತ್ತು ನಗರಗಳಲ್ಲಿ ನೆಲೆಸಿರುವರು.ವರ್ಷಕ್ಕೆರಡು ಮೂರು ಬಾರಿ ಹೋಗಿ ಬರುತ್ತೇವೆ. ಈ ಸಲ ನೀನು ಬರಬೇಕೆಂದನು.ನನಗೂ ಬಹಳ ಆಸೆ,ಆಸಕ್ತಿ ಕೇವಲ ಚಿತ್ರ, ಹಾಗೂ ವಿಡಿಯೋಗಳಲ್ಲಿ ಮಹಾರಾಷ್ಟ್ರದ ಕೊಂಕಣ್ (ಕೊಕಣ್) ಪ್ರದೇಶದ ಪ್ರಾಕೃತಿಕ ಸೌಂದರ್ಯ ನೋಡಿದ್ದು. ಸರಿ... ಈ ಸಲ ಒಂದೆರಡು ದಿನ ಪ್ರಕೃತಿಯ ಸೊಬಗನ್ನು ಕಣ್ಣಾರೆ ನೋಡಬಹುದೆಂದು ಹೊರಟೆ.ಶುಕ್ರವಾರ ಮಧ್ಯಾಹ್ನ ಹೊರಟೆವು ಹುಬ್ಬಳ್ಳಿಯಿಂದ ಹೆಚ್ಚು ಕಮ್ಮಿ 180 ಕಿ.ಮೀ ದೂರದ ಪ್ರಯಾಣ. ಪ್ರವೀಣ್ ಕಾರಿನಲ್ಲಿ ಆತನ ಇಬ್ಬರು ಸೋದರ ಸಂಬಂಧಿಗಳು ಹಾಗೂ ನಾನು, ರಾತ್ರಿ ತಲುಪಿ ವಿಶ್ರಾಂತಿ ಪಡೆಯುವ ಪ್ಲಾನ್.ಬೆಳಗಾವಿಯಿಂದ ಎರಡುವರೆ ತಾಸಿನಲ್ಲಿ ಫಾರ್ಮ್ ಹೌಸ್ ತಲುಪಿದೆವು. ಪ್ರಯಾಣವು ಬಹಳ ಖುಷಿ ಕೊಟ್ಟಿತು. ಮನೆಯಲ್ಲೇ ತಯಾರಿಸಿದ ಊಟ ಮಾಡಿದ್ದು ಗೊತ್ತು..ನಿದ್ದೆಗೆ ಯಾವಾಗ ಶರಣಾದೆವು ತಿಳಿಯಲಿಲ್ಲ.

ವಾಕಿಂಗ್ ನೆಪದಲ್ಲಿ ಸಹ್ಯಾದ್ರಿಯ ತಪ್ಪಲಲ್ಲಿರುವ ಹಳ್ಳಿ ಸುತ್ತಲು ಮುಂಜಾನೆ ತಯಾರಾದೆ. ಮಂಜಿನ ಹೊದಿಕೆಯನ್ನು ಭೇದಿಸಿ ಸೂರ್ಯ ರಶ್ಮಿ ವಸುಂಧರೆಯನ್ನು ನಮಸ್ಕರಿಸಿದಂತೆ. ಹೊಲಗಳಲ್ಲಿ ಪಕ್ಷಿಗಳ ದಂಡು,ತರಕಾರಿ,ಮಾವು, ಬಾಳೆ,ಕಬ್ಬಿನ ಫಸಲು, ಹಸುಗಳನ್ನು ಮೇಯಲು ಕರೆದೊಯ್ಯುವ ತಂಡ, ಅಲ್ಲೊಂದು ಇಲ್ಲೊಂದು ನೆಡೆದಾಡುವ ಹಿರಿಯರು.ಅಪ್ಪಟ ಸಮೃದ್ಧ ಹಳ್ಳಿಯ ದೃಶ್ಯ. ಗೋವಾ,ಮಲೆನಾಡು ಮತ್ತು ಕರ್ನಾಟಕ ಕರಾವಳಿಯ ಹಳ್ಳಿಗಳ ಬಹುತೇಕ ಹೊಲಿಕೆ ಇದೆ.ಆಚರಣೆ ನಂಬಿಕೆಗಳಲ್ಲೂ ಸಾಮ್ಯತೆ, ನಾಗನ ಕಲ್ಲುಗಳು, ದೈವಾರಾಧನೆ,(ಹೆಸರುಗಳು ಬೇರೆ)ಹಿರಿಯರ ಸಮಾಧಿ ಆರಾಧನೆ ಇತ್ಯಾದಿ. ನಿಜಕ್ಕೂ ಇವೆಲ್ಲಾ ನೋಡಿ ಮೂಖವಿಸ್ಮಿತನಾದೆ.ಅಷ್ಟರಲ್ಲಿ ಒಂದಿಬ್ಬರು ಕೊಕಣಿ ( ಮಾಲವಣ್ ಕೊಂಕಣ್ ಪ್ರಾಂತ್ಯದ ಮರಾಠಿ ಹಾಗೂ ಕೊಂಕಣಿ ಮಿಶ್ರಿತ ಭಾಷೆಯಲ್ಲಿ) ನನ್ನನ್ನು ಮಾತನಾಡಿಸುತ್ತಾರೆ.ನನ್ನ ಬಗ್ಗೆ ಹಾಗೂ ಯಾರ ಮನೆಗೆ ಬಂದಿರುವುದು ಎಲ್ಲಾ ಕೇಳಿದರು. ಮತ್ತೆ ಸಿಗೋಣವೆಂದು ಹೊಲದ ಹಾದಿ ಹಿಡಿದರು.

ಪ್ರವೀಣ್ ಬ್ರದರ್ಸ್ ಬಂದಿರುವ ವಿಷಯ ತಿಳಿದು ಅವರ ಕುಟುಂಬದ ಹಿರಿಯ ವಕೀಲರು ವರ್ಣೇಕರ್ ಬಂದಿದ್ದರು.ನನ್ನ ಪರಿಚಯವಾಯಿತು ಅವರ ಮಂಗಳೂರು ಉಡುಪಿ ಬಗ್ಗೆ ಅಪಾರ ಪ್ರೀತಿ,ಕಾಳಜಿ ಕಂಡು ಖುಷಿಯಾಯಿತು.ಬಂದಿರುವ ಕೆಲಸ ಮುಗಿಸಿ ಸಂಜೆ ಹರಟೆಗಾಗಿ ಮತ್ತೆ ಭೇಟಿಯಾಗೋಣ ಅಂದರು.ಸ್ವಲ್ಪ ವಿಶ್ರಾಂತಿ ಪಡೆದು ಸಂಜೆ ಹೊತ್ತು ಅನತಿ ದೂರದಲ್ಲಿರುವ ಬಯಲಿನಲ್ಲಿ ಮಕ್ಕಳೊಂದಿಗೆ ನಾವು ಕೂಡ ಕ್ರಿಕೆಟ್,ವಾಲಿಬಾಲ್ ಆಡಿದೆವು. ಆಗಸದಲ್ಲಿ ಬೆಳಕು ಮಂದವಾಯಿತು ಆದರೆ ಕತ್ತಲಾಗಲಿಲ್ಲಾ ಮಕ್ಕಳು,ಯುವಕರಿಗೆ ಮನೆಗೆ ಹೋಗುವ ಗಡಿಬಿಡಿ.ಐದು ನಿಮಿಷ ಎಲ್ಲರೂ ನಾಪತ್ತೆ ಮನೆಗೆ ತೆರಳಿದರು.

ಅರೇ..‌ನಿಜಕ್ಕೂ ಆಶ್ಚರ್ಯ ಕೇಳಿದೆ, ಈ ಸ್ಥಳದಲ್ಲಿ ಯಾರು ಕತ್ತಲಲ್ಲಿ ಓಡಾಡುವುದೇ ಇಲ್ಲ. ಆ ಮರಗಳು ನೋಡು ಅಂತ ಎರಡು ಮರಗಳನ್ನು ಪ್ರವೀಣ್ ತೋರಿಸಿದ. ವಿಶಾಲವಾದ ಅರಳಿ ಮರ ಅದರ ಪಕ್ಕದಲ್ಲಿ ಬೃಹತ್ ಹುಣಸೆ ಮರ ಇದರಲ್ಲಿ ಏನು ವಿಶೇಷ.. ಭಯ ಏಕೆ?.ಊಟ ಮುಗಿಸಿ ಕುಳಿತಿರುವಾಗ ಕೇಳಿದೆ ಹೇಳಿ ಸ್ವಾಮಿ... ಮರಗಳ ಕಥೆ,ಒಂದೊಂದಾಗಿ ಹೇಳಲು ಆರಂಭಿಸಿದರು.ಇದು ನಂಬಿಕೆ, ಆಚರಣೆಯ ವಿಷಯ ಇದರಲ್ಲಿ ತರ್ಕ ಅಥವಾ ನಮ್ಮ ನಿಷ್ಕರ್ಶ ಮುಖ್ಯವಲ್ಲ.ಊರಿನಲ್ಲಿ ಶಕುನ ಅಪಶಕುನ ಬಲವಾಗಿ ನಂಬುತ್ತಾರೆ.ರಾತ್ರಿಯ ಸಮಯ ಆ ಮರಗಳಲ್ಲಿ ದೆವ್ವ, ಭೂತ,ಬೇತಾಳ ಇತ್ಯಾದಿ ಶಕ್ತಿಗಳ ಉಪಟಳವಿದೆ.ಅಲ್ಲದೆ ಭೂತಗಳ ರಾಜ ಬೇತಾಳ ಉಲ್ಟಾ ನೇತಾಡುತ್ತಾನೆಂದು ಸ್ಥಳೀಯರು ಹೇಳುತ್ತಾರೆ ಅಂದ. ಅನೇಕರಿಗೆ ಕಂಡುಬಂದಿದೆ, ಅನುಭವ ಆಗಿದೆ. ಮರಗಳ ಹಿಂದೆ ಸ್ವಲ್ಪ ದೂರ ಕೆರೆಯಲ್ಲಿ ಆತ್ಮಹತ್ಯೆ ಮಾಡಿದ ಉದಾಹರಣೆ ಇದೆ.ಅನೇಕರಿಗೆ ರಾತ್ರಿ ಹೊತ್ತು ಕತ್ತು ಹಿಸುಕಿದಂತೆ,ಉಸಿರಾಟದ ಸಮಸ್ಯೆ ಆ ಜಾಗದಲ್ಲಿ ಅನುಭವಕ್ಕೆ ಬಂದಿದೆ. ಒಂದೆರಡು ಕೊಲೆಗಳಾಗಿದೆ. ಪಿತೃ ಪಕ್ಷದಲ್ಲಿ ಕೆರೆಯ ಬಳಿ ಪೂಜೆ ಮಾಡಲಾಗುತ್ತದೆ. ನನಗೆ ನಗು ತಡೆಯಲಾಗಲಿಲ್ಲ, ವಿಕ್ರಮ ಬೇತಾಳ ಧಾರಾವಾಹಿ ಕಥೆಯಾ? ನೀವು ಕೂಡ ಇದನ್ನು ನಂಬುವುದಾ? ಅಂದೆ.

ಇಲ್ಲ.. ನಮಗೆ ಭಯವಿಲ್ಲ, ಆದರೆ ನಮ್ಮ ಬಾಲ್ಯದಿಂದಲೇ ಇಲ್ಲಿ ಬಂದಾಗ ಹಿರಿಯರಿಂದ ಕೇಳಿ ಈ ನೆಲದ ಆಚರಣೆ, ಸಂಪ್ರದಾಯಕ್ಕೆ ಬೆಲೆ ಕೊಡಬೇಕಾದ ಅನಿವಾರ್ಯತೆ,ನಿನಗೆ ಭಯವಿಲ್ಲದಿದ್ದರೆ ಇವತ್ತು ಪೂರ್ತಿ ಅಲ್ಲದಿದ್ದರೂ ಅರ್ಧ ರಾತ್ರಿ ಅಲ್ಲಿರು ಅಂದರು.ಮತ್ತೆ ಪರ ವಿರೋಧದ ನಮ್ಮ ನಡುವೆ ವೈಜ್ಞಾನಿಕ ಚರ್ಚೆ ಕೂಡ ಆಯಿತು,ಅರಳಿ ಮರ ರಾತ್ರಿ ನಂತರ ಹೇರಳವಾಗಿ ಕಾರ್ಬನ್ ಡೈ ಆಕ್ಸೈಡ್ ಪರಿಸರದಲ್ಲಿ ಬಿಡುತ್ತದೆ. ಹುಣಸೆ ಮರವಂತೂ ಪೂರ್ತಿ ಆಮ್ಲಜನಕ ಹೀರುತ್ತದೆ, ಬಿಡುವುದಿಲ್ಲ.ಆ ಕಾರಣ ಕೂಡ ಇರಬಹುದೆಂದು ಚರ್ಚೆಗೆ ತಾರ್ಕಿಕ ಪೂರ್ಣ ವಿರಾಮ ಹಾಕೋ ಪ್ರಯತ್ನದಲ್ಲಿರುವ ವೇಳೆ, ವರ್ಣೇಕರ್ ಸಾಹೇಬರು ಬಂದರು.ಏನು ಹಾರರ್ ಸ್ಟೋರಿ ನಡೆಯುತ್ತಿದೆ ಮಂಡಳಿಯ ಜೊತೆ ನಾನು ಸೇರಬಹುದೇ ಎಂದು ಕುಳಿತರು. ಎಲ್ಲರಿಗೂ ತುಂಬಾ ಖುಷಿಯಾಯಿತು.

ಮನೆಯಲ್ಲಿ ತಯಾರಿಸಿದ ತಿನಿಸುಗಳ ಜೊತೆ ಹಣ್ಣುಗಳನ್ನೂ ತಂದಿದ್ದರು,ಮನೆ ಕೆಲಸದ ಹುಡುಗ ಜೊತೆಗಿದ್ದ. ನಿದ್ರೆ ಬರೋ ತನಕ ಆ ಮರಗಳ ಕಟ್ಟೆಯ ಬಳಿ ಕುಳಿತು ಚರ್ಚೆ ಮುಂದುವರಿಸೋಣ ನಿಮ್ಮ ಸಂಶಯ,ಭಯ ಎಲ್ಲಾದಕ್ಕೂ ಖುದ್ದು ಉತ್ತರ ಸಿಗಬಹುದು ಅಂದರು.ಮೊದಲು ಮುಜುಗರ,ಭಯ ಅನಿಸಿತು ಮತ್ತೆ ಎಲ್ಲರೂ ಧೈರ್ಯದಿಂದ ಹೋದೆವು. ಸಮಯ ರಾತ್ರಿಯ ಹತ್ತು ,ಬೀದಿ ದೀಪಗಳು ನಗರದಲ್ಲಿರುವಂತೆ ಇರಲಿಲ್ಲ, ಅರ್ಧ ಕಿ.ಮೀಗೆ ಒಂದು ಲೈಟ್. ಚಾರ್ಜರ್ ಟ್ಯೂಬ್ ಲೈಟ್, ಟಾರ್ಚ ಇತ್ಯಾದಿ ವ್ಯವಸ್ಥೆ ಮಾಡಿಕೊಂಡೆವು. ಸ್ಮಶಾನ ಮೌನ, ಒಬ್ಬ ಜೋರಾಗಿ ಕೆಮ್ಮಿದರೂ ಜೀವ ಹೋಗುವಂತ ಸನ್ನಿವೇಶ. ದಿನದ ಬೆಳಕಲ್ಲಿ ರಮಣೀಯ ಪ್ರಕೃತಿ ದೃಶ್ಯ ರಾತ್ರಿ ಅಷ್ಟೇ ಭಯಾನಕ.ಕೀಟಗಳು, ಜೀರುಂಡೆಗಳ ಶಬ್ದ ಭಯವನ್ನು ಹಿಮ್ಮಡಿಗೊಳಿಸಿತು.ಒಂದಿಬ್ಬರು ನಾವು ಮನೆಗೆ ಹೋಗುತ್ತೇವೆ ಅಂದಾಗ ವಕೀಲರು ಬನ್ನಿ ಕೇವಲ ಐದು ನಿಮಿಷ ಮತ್ತೆ ಇದು ಸಾಮಾನ್ಯ ಅನಿಸುತ್ತೆ ಅಂತ ಧೈರ್ಯ ತುಂಬಿದರು.

ಎಲ್ಲರೂ ಕುಳಿತಿರುವಾಗ ಊರಿನ ಅವರ ಪರಿಚಯದ ಇಬ್ಬರು ಯುವಕರು ಸೇರಿದರು.ಹೇಳಿ ಯಾವ ಭಯ? ಇಷ್ಟೊಂದು ತಂಪಾದ, ಶಾಂತಿಯುತ ಪ್ರಕೃತಿಯನ್ನು ಭೂತ ದೆವ್ವ ಗಳ ಕಥೆ ಹೇಳಿ ಭಯ ಹುಟ್ಟುವಂತೆ ಮಾಡಿದ್ದು ಯಾರು,ಏಕೆ, ಕಾರಣ ಏನಾದರೂ ಗೊತ್ತೇ ? ಭಕ್ತಿ ಶ್ರದ್ಧೆ ನನಗೂ ಇದೆ. ಮೂಡನಂಬಿಕೆ ಸುಳ್ಳು ಕಥೆಗಳ ಹಬ್ಬಿಸುವುದರ ವಿರೋಧ.ಅಲ್ಲೇ 500 ಮೀ ದೂರದಲ್ಲಿ ಗಣೇಶನ ಗುಡಿಯಿದೆ ಯಾವ ನಕಾರಾತ್ಮಕ ಶಕ್ತಿ ಬರಲು ಸಾಧ್ಯ? ಇದನ್ನೆಲ್ಲಾ ಕೇಳಿ ನಾವೆಲ್ಲ ಗೊಂದಲದಲ್ಲಿ ಒಬ್ಬರನ್ನೊಬ್ಬರು ನೋಡಿದೆವು. ಹೌದು, ಇತ್ತೀಚೆಗೆ ಈ ಎಲ್ಲಾ ಕಥೆಗಳು ಜಾಸ್ತಿಯಾಗಿದೆ.ನೀವೆಲ್ಲರೂ ವಿದ್ಯಾವಂತರು, ಸಾಮಾನ್ಯ ಜ್ಞಾನ ಇದೆ.ಪ್ರತಿಷ್ಠಿತ ಕಂಪನಿಗಳಲ್ಲಿ ನೌಕರಿ ಮಾಡುವವರು ಯೋಚನೆ ಮಾಡಿ ಇವೆಲ್ಲಾ ಮಾನವ ನಿರ್ಮಿತ ಪೊಳ್ಳು ಕಥೆಗಳು. ತಮ್ಮ ಗೌಪ್ಯ ವ್ಯವಹಾರ, ಅಕ್ರಮ ಚಟುವಟಿಕೆಗಾಗಿ ಇಂತಹ ಕಥೆಗಳನ್ನು ಮತ್ತು ಅದಕ್ಕೆ ಪೂರಕವಾಗಿ ಕಾಕತಾಳೀಯವೆಂಬಂತೆ ನಡೆದ ಘಟನೆಗಳನ್ನು ತಾಳೆಹಾಕಿ ಮುಗ್ಧ ಜನರಲ್ಲಿ ಭೀತಿ ಹುಟ್ಟಿಸುವುದ. ಪುರಾವೆ ಸಾಕ್ಷಿ ಇಲ್ಲದೇ ಪೋಲೀಸರು ತನಿಖೆ ಮಾಡುವಂತಿಲ್ಲ ಇದರಿಂದ ಅವರಿಗೆ ಲಾಭವಾಗಿದೆ.

ಒಂದೊಂದಾಗಿ ವರ್ಣೇಕರ್ ರು ಹೇಳುತ್ತಾ ಹೋದರು, ಭೂಗಳ್ಳರು,ಕಾಡಿನ ಸಂಪತ್ತು ಕೊಳ್ಳೆ ಹೊಡೆಯುವ,ಅಕ್ರಮ ಗಣಿಗಾರಿಕೆ ಮಾಡೋ ದುಷ್ಟರು ಕಣ್ಣಿಗೆ ಕಾಣದ ದೆವ್ವ, ಭೂತ ಬೇತಾಳಗಿಂತ ಖತರ್ನಾಕ.ಇಲ್ಲಿನ ಅನೇಕರು ದೊಡ್ಡ ನಗರಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಅದೇ ಇವರಿಗೆ ವರದಾನ. ಗುಡ್ಡವನ್ನು ಹದಮಾಡಿ ಕಮರ್ಷಿಯಲ್ ಬೆಳೆಗಳನ್ನು ಅಕ್ರಮವಾಗಿ ಬೆಳೆಸುವುದು.ಅವೈಜ್ಞಾನಿಕವಾಗಿ ಕಾಡುಗಳ ನಾಶ, ಮುಂದೆ ಹದಮಾಡಿದ ಗುಡ್ಡಗಳಲ್ಲಿ ರೆಸಾರ್ಟ್ ಇತ್ಯಾದಿ ಸ್ಥಾಪಿಸುವ ಉದ್ದೇಶ. ಉದ್ಯೋಗದ ನೆಪವೊಡ್ಡಿ,ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಮಾರಣ ಹೋಮ ಮಾಡಲಾಗುತ್ತಿದೆ.ಕಲ್ಲಿನ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.ಇವರಿಗೆ ಭೂತ ಪಿಶಾಚಿಗಳು ತೊಂದರೆ ಕೊಡದೆ ಕೇವಲ ಸಾಮಾನ್ಯ ಜನರಿಗೆ ಹಾನಿ ಮಾಡುವ ಸೆಲೆಕ್ಟಿವ್ ಮಾಡರ್ನ್ ದೆವ್ವಗಳೇ? ಎಂಬ ಹಾಸ್ಯದಿಂದ ಒಂದು ಲೆವೆಲ್ ನ ಚರ್ಚೆ ನಿಲ್ಲಿಸಿದರು.

ಇದಕ್ಕೆ ಯಾವುದೇ ಪ್ರತಿರೋಧ, ಕಾನೂನು ಹೋರಾಟ,ಪೋಲಿಸ್ ಕೇಸ್ ಯಾವುದೇ ಆಗಲಿಲ್ಲವೇ ಎಂದು ನಮ್ಮ ಕಡೆಯಿಂದ ಕೇಳಿದಾಗ,ನಾನು ಸ್ವತಃ ಕೊಕಣ್ ಭಾಗದ ಸಹ್ಯಾದ್ರಿ,ಪಶ್ಚಿಮ ಘಟ್ಟ ಹೋರಾಟ ಸಮಿತಿಯಲ್ಲಿದ್ದು. ಜಿಲ್ಲಾ ಪರಿಸರ ವೇದಿಕೆಯ ಕಾರ್ಯದರ್ಶಿಯಾಗಿರುವೆ.ಮಾಧವ ಗಾಡ್ಗೀಳ್ ವರದಿ ಆದಷ್ಟು ಬೇಗ ಸರ್ಕಾರದ ಕೈ ಸೇರಲಿದೆ. ವರದಿಯಲ್ಲಿ ಮುಂದಿನ 50 ವರ್ಷಗಳಲ್ಲಿ ಪಶ್ಚಿಮ ಘಟ್ಟಗಳಿರುವ ದೇಶದ 6 ರಾಜ್ಯ 44 ಜಿಲ್ಲೆಗಳ ನಕಾರಾತ್ಮಕ ಪರಿಣಾಮಗಳ ಸಂಪೂರ್ಣ ವರದಿ ಇದ್ದು.ಅದಾಗಲೇ ಸರಕಾರದ ಮೂಲಕ ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೂ ತಲುಪಲಿದೆ.ಅನೇಕ ಕಡೆ ಚಟುವಟಿಕೆಗಳಿಗೆ, ಮೂಲ ನಿವಾಸಿಗಳ ಹೊರತು ಇತರರ ಪ್ರವೇಶಕ್ಕೆ ಅಂಕುಶ ಬಿದ್ದ ಕಾರಣ, ಪಶ್ಚಿಮ ಘಟ್ಟದ ಹಾಗೂ ಸಹ್ಯಾದ್ರಿಯ ತಪ್ಪಲಿನ ಹಳ್ಳಿಗಳಲ್ಲಿ ಈ ರೀತಿಯ ಕಥೆಗಳನ್ನು ಭಯ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ.

ಇದೇ ವರ್ಷ ಜುಲೈನಲ್ಲಿ ಕಂಡು ಕೇಳರಿಯದ ಮಳೆ ಕೊಕಣ್ ಪ್ರದೇಶದಲ್ಲಿ ಮತ್ತು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ರಣಮಳೆಗೆ ಭಾರಿ ಭೂಕುಸಿತದ ಪರಿಣಾಮಗಳು ನಮ್ಮ ಕಣ್ಣ ಮುಂದಿದೆ.ಅದೇ ಭಾಗದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ರಾಜಧಾನಿ ರಾಯಗಡ್ ನಲ್ಲಿ 50 ಕ್ಕೂ ಹೆಚ್ಚು ಜನ ಭೂಕುಸಿತದಲ್ಲಿ ನಾಪತ್ತೆಯಾಗಿ ಬಹುತೇಕ ಜನರ ಸಾವಿನ ಸುದ್ದಿ ಕೇಳಿದಾಗ ವರ್ಣೇಕರ್ ರು ಹೇಳಿದ ಮಾತುಗಳ ನೆನಪಾಯಿತು.'ಬೆಟ್ಟದ ಮಣ್ಣು ಜಾರುಬಂಡಿಯಲ್ಲಿ ಜಾರಿದಂಗೆ ಹೋಗುವ ದಿನಗಳು ದೂರವಿಲ್ಲ. ಪ್ರಾಕೃತಿಕ ವಿಕೋಪಗಳು ಮಾನವನ ಹದ್ದು ಮೀರಿ ಹೋಗುತ್ತದೆ'.ವಿಪರ್ಯಾಸ ನೋಡಿ ಅವರು ಅಂದಾಜು 20 ವರ್ಷಗಳ ನಂತರ ಆಗಬಹುದೆಂಬ ಊಹೆ ಮಾಡಿದ್ದರು, ಆದರೆ ಹತ್ತೇ ವರ್ಷಗಳಲ್ಲಿ ಅನಾಹುತ ನೋಡುವಂತಾಯಿತು. ಗಂಭೀರವಾಗಿ ಯೋಚಿಸಲೇ ಬೇಕಾದ ಅನಿವಾರ್ಯತೆ. ನೇತಾಡುವ ಭೂತವನ್ನು ಓಡಿಸಬಹುದು ಆದರೆ ಮಾನವ ಮಾಡಿಕೊಂಡ ನೈಸರ್ಗಿಕ ಶಾಪದ ಭೂತಕ್ಕೆ ಪರಿಹಾರ ಯಾರಲ್ಲೂ ಇಲ್ಲ ಆಲ್ವಾ...!

----------ಕಿರಣ್ ಪೈ ಮಂಗಳೂರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.