



ಬೆಂಗಳೂರು: ಚೀನಾ, ದಕ್ಷಿಣ ಕೊರಿಯಾ, ಹಾಂಗ್‍ಕಾಂಗ್ ಸೇರಿದಂತೆ ಎಂಟು ದೇಶಗಳಲ್ಲಿ ಕೋವಿಡ್ ಹರಡುವಿಕೆ ತೀವ್ರವಾಗಿದ್ದು, ಈ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ
ದೇಶದಲ್ಲಿ ನವದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಇದಕ್ಕಾಗಿ ತುರ್ತು ಸಮಾಲೋಚನೆ ಸಭೆ ನಡೆಸಲಾಗಿದೆ. ಈ 8 ದೇಶಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇರಿಸಬೇಕಿದೆ. ಆ ಪ್ರಯಾಣಿಕರಿಗೆ ಥರ್ಮಲ್ ತಪಾಸಣೆ ಮಾಡುವುದು, ಅವರು ಮನೆಗೆ ತೆರಳಿದ ಬಳಿಕ ಒಂದು ವಾರ ಅಥವಾ ಹತ್ತು ದಿನ ಟೆಲಿ ಮಾನಿಟರಿಂಗ್ ಮಾಡುವುದು, ಲಸಿಕೆ ಪಡೆಯದ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸುವುದು, ಸುಮಾರು 5 ಸಾವಿರ ಮಕ್ಕಳಿಗೆ ಪರೀಕ್ಷೆ ಮಾಡುವುದು ಮೊದಲಾದ ಸಲಹೆಗಳನ್ನು ತಜ್ಞರು ನೀಡಿದ್ದಾರೆ.
ದುಬಾರಿ ಶುಲ್ಕ ವಸೂಲಿಗೆ ಕಡಿವಾಣ
ಕೆಲ ಆಸ್ಪತ್ರೆಗಳಲ್ಲಿ ಮನಸೋ ಇಚ್ಛೆ ದರ ನಿಗದಿ ಮಾಡಿರುವುದರ ಬಗ್ಗೆ ದೂರುಗಳು ಬಂದಿತ್ತು. ಇದಕ್ಕೆ ಕಡಿವಾಣ ಹಾಕಬೇಕೆಂಬುದು ಸರ್ಕಾರದ ಉದ್ದೇಶ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಯಾಗಿದ್ದು, ಸಮಿತಿ ರಚಿಸಲಾಗುವುದು. ಸಿಟಿ ಸ್ಕ್ಯಾನ್, ಎಂಆರ್ ಐ, ಸ್ಕ್ಯಾನಿಂಗ್ ಮೊದಲಾದವುಗಳ ದರ ಪರಿಷ್ಕರಣೆಯನ್ನು ಮಾಡಲಾಗಿದ್ದು, ಇದನ್ನು ಕೋವಿಡ್ ಸಂದರ್ಭದಲ್ಲಿ ಮಾತ್ರ ಎಂದು ಪರಿಗಣಿಸದೆ ಹೊಸ ದರವೆಂದು ಪರಿಗಣಿಸಬೇಕೆಂದು ಆಯುಕ್ತರಿಗೆ ಸೂಚಿಸಲಾಗಿದೆ. ಇದಕ್ಕಿಂತ ಹೆಚ್ಚು ದರ ವಸೂಲಿ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಆಸ್ಪತ್ರೆಯ ಪರವಾನಗಿ ಕೂಡ ರದ್ದು ಮಾಡಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.