



ಮಂಗಳೂರು: ಹೊಸ ವಾಹನ ಖರೀದಿಸುವವರೇ ಗಮನಿಸಿ, ಇನ್ನು ಮುಂದೆ ನೀವು ವಾಹನ ಡೆಲಿವರಿ ಪಡೆಯುವಾಗ ನೋಂದಣಿ ಸಂಖ್ಯೆ ಅಳವಡಿಸಿರಲೇಬೇಕು.
ಸಾಮಾನ್ಯವಾಗಿ ಹೊಸ ವಾಹನ ಖರೀದಿಸು ವವರು ಹಣ ಪಾವತಿಯಾದ ಕೂಡಲೇ ನೋಂದಣಿ ಮಾಡಿಸಿ, ನಂಬರ್ ಪ್ಲೇಟ್ ಬರುವ ಮುಂಚೆಯೇ ಡೆಲಿವರಿ ಪಡೆದುಕೊಳ್ಳುವುದು ವಾಡಿಕೆ. ಆದರೆ ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ಅಂತಿಮ ಅಧಿಸೂಚನೆಯ ಪ್ರಕಾರ ಮೋಟಾರು ವಾಹನಗಳ ಕಾಯಿದೆ 1988ರ ಕಲಂ 41(6)ರ ಅನ್ವಯ ಇದೇ ಮಾ. 3ರಿಂದ ಅನ್ವಯವಾಗುವಂತೆ ಅತೀ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸದೆ ಹೊಸ ವಾಹನಗಳನ್ನು ಮಾಲಕರಿಗೆ ನೀಡುವಂತಿಲ್ಲ. ಇದಕ್ಕಾಗಿ ಕೇಂದ್ರ ಮೋಟಾರು ವಾಹನಗಳ 1989ರ ನಿಯಮ 50ಕ್ಕೆ ತಿದ್ದುಪಡಿ ಮಾಡಲಾಗಿದ್ದು, 1-4- 2019ರಿಂದ ಜಾರಿಗೆ ಬರಬೇಕಿತ್ತು. ಈಗ ಕಡ್ಡಾಯಗೊಳಿಸಲಾಗಿದೆ.
ಗ್ರಾಹಕರಿಗೆ ಹೊಸ ನಿಯಮದ ಮಾಹಿತಿ ಇಲ್ಲ. ಹಣ ಪಾವತಿಸಿ, ನೋಂದಣಿಯಾದ ಕೂಡಲೇ ವಾಹನ ಹಸ್ತಾಂತರ ಮಾಡುವಂತೆ ಆಗ್ರಹಿಸುತ್ತಾರೆ. ಹೊಸ ನಿಯಮದ ಬಗ್ಗೆ ತಿಳಿಸಿದರೆ “ಇದುವರೆಗೆ ಇಲ್ಲದ ನಿಯಮ, ನೀವೇ ಮಾಡಿದ್ದಾ’ ಎಂದು ಪ್ರಶ್ನಿಸು ತ್ತಾರೆ ಎನ್ನುವುದು ವಾಹನ ಡೀಲರ್ ಒಬ್ಬರ ಮಾತು.
ಈಗ ಹಿಂದಿನಂತೆ ಹೊಸ ವಾಹನ ಗಳನ್ನು ನೋಂದಣಿಗಾಗಿ ಆರ್‌ಟಿಒ ಕಚೇರಿಗೆ ಕೊಂಡು ಹೋಗಬೇಕಾಗಿಲ್ಲ, ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತದೆ. ಗ್ರಾಹಕರು ಹಣ ಪಾವತಿಸಿದ ಕೂಡಲೇ ಸ್ವಯಂ ಆಗಿ ನೋಂದಣಿ ಸಂಖ್ಯೆ ಜನರೇಟ್ ಆಗುತ್ತದೆ. ಒಂದು ವೇಳೆ ವಿಶಿಷ್ಟ ಸಂಖ್ಯೆಯೇ ಬೇಕಿದ್ದರೆ ಆರ್‌ಟಿಒಗೆ ತೆರಳಿ ಹೆಚ್ಚು ಮೊತ್ತ ಪಾವತಿಸಿ ಪಡೆಯಬೇಕು. ನೋಂದಣಿ ಸಂಖ್ಯೆಯನ್ನು ಬಳಿಕ ನಂಬರ್ ಪ್ಲೇಟ್ ಮಾಡುವವರಿಗೆ ಕಳುಹಿಸಲಾಗುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.