



ಭುವನೇಶ್ವರ: ಜೂ.2ರಂದು ಸಂಭವಿಸಿದ 292 ಜನರ ಸಾವಿಗೆ ಕಾರಣವಾದ ತ್ರಿವಳಿ ರೈಲು ದುರಂತದ ವಿಚಾರಣೆ ನಡೆಸುತ್ತಿರುವ ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಗ್ನಲ್ ಜೂನಿಯರ್ ಎಂಜಿನಿಯರ್‌ನನ್ನು ವಿಚಾರಣೆಗೆ ಒಳಪಡಿಸಿದೆ.
ಅಲ್ಲದೇ ಹೆಚ್ಚಿನ ತನಿಖೆಗಾಗಿ ಆತನ ಮನೆಯನ್ನು ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆ ನಡೆಸುತ್ತಿರುವ ಸಿಬಿಐನ ಐವರು ಅಧಿಕಾರಿಗಳ ತಂಡ ಸೋಮವಾರ ಎಂಜಿನಿಯರ್ ಮನೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದು, ಸೀಲ್ ಮಾಡಿದ್ದಾರೆ. ಅಲ್ಲದೆ ಎಂಜಿನಿಯರ್‌ನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮಾಡಲಾಗಿದೆ. ಹೆಚ್ಚಿನ ವಿಚಾರಣೆಗೆ ಆತನನ್ನು ಮನೆಗೂ ಕರೆತರಬಹುದು ಎಂದು ವರದಿಗಳು ಹೇಳಿವೆ.
ಈ ನಡುವೆ, ಎಂಜಿನಿಯರ್ ಘಟನೆ ನಡೆದಾಗಿನಿಂದ ತಲೆಮರೆಸಿಕೊಂಡಿದ್ದಾನೆ ಎಂಬ ವದಂತಿಗಳು ಹರಡಿದ್ದವು. ಆದರೆ ಅದನ್ನು ತಳ್ಳಿಹಾಕಿರುವ ರೈಲ್ವೆ ವಕ್ತಾರರು, ‘ಯಾವ ಸಿಬ್ಬಂದಿಯೂ ನಾಪತ್ತೆಯಾಗಿಲ್ಲ. ಎಲ್ಲರೂ ಸಿಬಿಐ ಹಾಗೂ ರೈಲ್ವೆ ಸುರಕ್ಷತಾ ಆಯುಕ್ತರ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದಿದ್ದಾರೆ. ವಿಚಾರಣೆಗೆ ಒಳಪಟ್ಟ ಎಂಜಿನಿಯರ್, ಸಿಗ್ನಲಿಂಗ್ ಉಪಕರಣಗಳ ಅಳವಡಿಕೆ, ನಿರ್ವಹಣೆ ಹಾಗೂ ದುರಸ್ತಿಯ ಹೊಣೆ ಹೊತ್ತಿದ್ದರು. ರೈಲು ದುರಂತದಲ್ಲಿ 292 ಜನರು ಮೃತಪಟ್ಟು, 11 00 ಜನರು ಗಾಯಗೊಂಡಿದ್ದರು. ಘಟನೆಗೆ ಸಿಗ್ನಲ್ ವ್ಯವಸ್ಥೆಯಲ್ಲಿನ ವೈಫಲ್ಯವೇ ಕಾರಣ ಎಂದು ಆರೋಪಿಸಲಾಗಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.