



ಮಂಗಳೂರು: ನಗರದ ದೇರೆಬೈಲ್ ಕೊಂಚಾಡಿ ಸಮೀಪದ ಲ್ಯಾಂಡ್ ಲಿಂಕ್ಸ್ ಬಡಾವಣೆಯಿಂದ ಬಜಾಲ್ ಪಡ್ಪುವಿಗೆ ನೂತನ ಸರಕಾರಿ ಸಿಟಿ ಬಸ್ ಸೇವೆ ಬುಧವಾರ ಬೆಳಗ್ಗೆ ಅಧಿಕೃತವಾಗಿ ಉದ್ಘಾಟನೆಗೊಳ್ಳುವ ಮೂಲಕ ಬಸ್ ಬರುತ್ತಾ? ಇಲ್ವಾ? ಎಂಬ ಅನಿಶ್ಚಿತತೆಗೆ ಬ್ರೇಕ್ ಬಿದ್ದಿದೆ.
ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಬಡಾವಣೆಗೆ ಆಗಮಿಸಿ ಬಸ್ ಸಂಚಾರವನ್ನು ಉದ್ಘಾಟಿಸಿದರು. ಆ ಮೂಲಕ ಬಸ್ ಸಂಚಾರಕ್ಕೆ ಕೊನೇ ಕ್ಷಣದಲ್ಲಿ ಒದಗಿದ್ದ ಆತಂಕವನ್ನು ದೂರ ಮಾಡಿದರು.
ಬದ್ಧತೆ ಪ್ರದರ್ಶಿಸಿದ ಶಾಸಕರನ್ನು ಸ್ಥಳೀಯ ನಿವಾಸಿಗಳು ಆಭಿನಂದಿಸಿದರು.
ಸರಕಾರಿ ಸಿಟಿ ಬಸ್ ಪ್ರಾಯೋಗಿಕ ಸಂಚಾರ ಸೋಮವಾರ ನಡೆದಿತ್ತು. ಬಳಿಕ ಮಂಗಳವಾರ ಅಧಿಕೃತ ಉದ್ಘಾಟನೆ ಎಂದು ತಿಳಿಸಲಾಗಿತ್ತು. ಆದರೆ ಮಂಗಳವಾರ ಅದು ನೆರವೇರಲಿಲ್ಲ. ಮತ್ತೆ ಬುಧವಾರ ಉದ್ಘಾಟನೆ ಎಂದು ಹೇಳಲಾಗಿತ್ತು. ಆದರೆ ಮಂಗಳವಾರ ಸಂಜೆಯ ಹೊತ್ತಿಗೆ ಸರಕಾರಿ
ಬಸ್ ಬರೋಲ್ಲ ಎಂಬ ಸಂದೇಶ ಬಂತು.
ಖಾಸಗಿ ಲಾಬಿಗೆ ನಮ್ಮ ಜನಪ್ರತಿನಿಧಿಗಳು ಮಣಿದರು ಎಂಬ ಆರೋಪ ಕೇಳಿ ಬಂತು. ಕೆಸ್ಸಾರ್ಟಿಸಿಯಲ್ಲಿ ವಿಚಾರಿಸಿದರೆ, ಟೆಕ್ನಿಕಲ್ ಪ್ರಾಬ್ಲೆಂ ಸದ್ಯ ಆರಂಭಿಸಲಾಗುವುದಿಲ್ಲ ಎಂಬ ಉತ್ತರ ಬಂತು. ಸ್ಥಳೀಯ ಶಾಸಕ ಡಾ.ಭರತ್ ಶೆಟ್ಟಿ ಅವರು ಖಾಸಗಿ ಬಸ್ ಪರ ಲಾಬಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಲಾರಂಭಿಸಿತು. ಇದರ ವಿರುದ್ಧ ಹಕ್ಕೊತ್ತಾಯ ಮಂಡಿಸಲಾಯಿತು. ಜತೆಗೆ ಪ್ರತಿಭಟನೆಗೂ ಇಲ್ಲಿನ ನಿವಾಸಿಗಳು ಸಿದ್ಧತೆ ನಡೆಸಿದರು. ಇವೆಲ್ಲದರ ಫಲಶ್ರುತಿ ಎನ್ನುವಂತೆ ಬಸ್ ಉದ್ಘಾಟನೆ ನಡೆಸುವುದನ್ನು ಖಾತ್ರಿಪಡಿಸುವ ಅಧಿಕೃತ ಪ್ರಕಟಣೆ ಮಂಗಳವಾರ ರಾತ್ರಿ ವೇಳೆ ಹೊರಬಿತ್ತು. ಅದರಂತೆ ಬುಧವಾರ(ಇಂದು) ಬೆಳಗ್ಗೆ ಶಾಸಕರು ಬಸ್ ಸಂಚಾರವನ್ನು ಉದ್ಘಾಟಿಸಿದರು. ಆದರೆ, ಇನ್ನೂ ಅನಿಶ್ಚಿತತೆ ಇದೆ.
ಖಾಸಗಿ ಲಾಬಿ ಮತ್ತೆ ಮುಂದುವರಿದರೆ ಈ ಬಸ್ ಸೇವೆ ಮತ್ತೆ ಯಾವಾಗ ಸ್ಥಗಿತಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಎಸ್ಸಾರ್ಟಿಸಿ ಎಂಬ ಅರೆ ಸರಕಾರಿ ಸಂಸ್ಥೆಯು ಪೂರ್ತಿಯಾಗಿ ಸ್ಥಳೀಯ ಶಾಸಕರು, ಸಂಸದರನ್ನು ಅವಲಂಬಿಸಿ ಕಾರ್ಯನಿರ್ವಹಿಸುತ್ತಿದೆ. ಯಾವನಾದರು ಒಬ್ಬ ಶಾಸಕ ಬೇಡ ಅಂದ ತಕ್ಷಣ ತಾಂತ್ರಿಕ ಸಮಸ್ಯೆ, ನಷ್ಟ ಮುಂತಾದ ಕಾರಣಗಳನ್ನು
ಕೊಟ್ಟು ಬಸ್ ಸಂಚಾರವನ್ನು ನಿಲ್ಲಿಸಿ ಬಿಡುವ ಬೆನ್ನೆಲುಬಿಲ್ಲದ ಅಧಿಕಾರಿಗಳೇ ಹೆಚ್ಚು. ಕೆಲವು ರೂಟ್ ನಲ್ಲಿ ಇಂತಹ ಘಟನೆ ಈ ಹಿಂದೆಯೂ ನಡೆದಿದೆ. ಯಾವುದಕ್ಕೂ ಲ್ಯಾಂಡ್ ಲಿಂಕ್ ನಿವಾಸಿಗಳು ಒಂದು ರಾಜಕೀಯ ಪಕ್ಷಕ್ಕೆ ಅಂಟಿಕೊಂಡು ಕಣ್ಮುಚ್ಚಿ ವ್ಯವಹರಿಸದೆ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.