



ಉಜಿರೆ : ಬೆಳ್ತಂಗಡಿ ತಾಲೂಕಿನ ಉಜಿರೆ ದೂರವಾಣಿ ವಿನಿಮಯ ಕೇಂದ್ರದ ಸಮೀಪ ಶುಕ್ರವಾರ ವ್ಯಕ್ತಿಯೋರ್ವರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಮಡಿಕೇರಿ ಕುಶಾಲನಗರ ಮೂಲದ ತಮ್ಮಯ್ಯ (55) ಉಜಿರೆಯಲ್ಲಿ ಬಹಳ ಸಮಯದಿಂದ ವಾಸವಿದ್ದರು. ಅವರು ಬಸ್ ತಂಗುದಾಣ, ಅಂಗಡಿಗಳು ಮುಚ್ಚಿದಾಗ ಅವುಗಳ ಮುಂಭಾಗದಲ್ಲಿ, ಬಿಎಸ್ಸೆನ್ನೆಲ್ ಕಚೇರಿ ಪಕ್ಕದಲ್ಲಿ ವಸತಿ ಹೂಡಿ ದಿನ ಕಳೆಯುತ್ತಿದ್ದರು.
ಆದರೆ ಅವರ ವಾರಸುದಾರರ ಕುರಿತು ಈ ಪರಿಸರದ ಯಾರಿಗೂ ಮಾಹಿತಿ ಇರಲಿಲ್ಲ. ಇವರ ಮೃತದೇಹ ದೂರವಾಣಿ ವಿನಿಮಯ ಕೇಂದ್ರದ ಬಳಿ ಪತ್ತೆಯಾಗಿದೆ. ಈ ಬಗ್ಗೆ ಉಜಿರೆ ಬೆಳಾಲು ಘಟಕದ ಶೌರ್ಯ ವಿಪತ್ತು ಸ್ವಯಂಸೇವಕರಾದ ರವೀಂದ್ರ, ಸುಧೀರ್ ಹಾಗೂ ರಾಘವೇಂದ್ರ ಇವರು ತತ್‌ಕ್ಷಣ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರ ಸಮ್ಮುಖದಲ್ಲಿ ಕುಟುಂಬದವರ ಪತ್ತೆಗಾಗಿ ವ್ಯಕ್ತಿಯ ಮೃತದೇಹದ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಸುಮಾರು 6.65 ಲಕ್ಷ ರೂ. ಹಣ ಪತ್ತೆಯಾಗಿದೆ. ಇದನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಅವರು ಮುಂದಿನ ಪ್ರಕ್ರಿಯೆ ನಡೆಸಲಿದ್ದಾರೆ. ವ್ಯಕ್ತಿಯು ಕೂಲಿ ಕೆಲಸ ಮಾಡಿ ಸಂಗ್ರಹಿಸಲಾಗಿದ್ದ ಮೊತ್ತವಾಗಿರಬಹುದು ಎಂದು ಅಂದಾಜಿಸಲಾಗಿದೆ. ವಿಪತ್ತು ನಿರ್ವಹಣ ಯೋಜನಾಧಿಕಾರಿ ಜೈವಂತ ಪಟಗಾರ್ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.