


ಕಾರ್ಕಳ: ಕಾನೂನು ಮತ್ತು ಅಧಿಕಾರಿ ಎನ್ನುವುದು ಎರಡು ಅಲಗಿನ ಕತ್ತಿಯಂತೆ. ಕಾನೂನುಗಳಿರುವುದು ಜನರ ಕ್ಷೇಮಕ್ಕಾಗಿ. ಆದರೆ ಅದೇ ಕಾನೂನುಗಳ ಜನರನ್ನು ಸತಾಯಿಸಲೂ ಬಳಕೆಯಾಗಬಹುದು. ಇದಕ್ಕೆ ಅವಕಾಶ ನೀಡದೆ ಜನಪರವಾಗಿ, ಜನಸ್ನೇಹಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಮತ್ತು ಮನಸ್ಸು ಸರಕಾರಿ ಅಧಿಕಾರಿಗಳಿಗೆ ಅಗತ್ಯ. ಈ ಪ್ರಜ್ಞೆಯಿಂದ ಕೆಲಸ ಮಾಡಿದಾಗ ಮಾತ್ರ ಉತ್ತಮ ಆಡಳಿತ ಕೀರ್ತಿ ಅಂತಹ ಅಧಿಕಾರಿಗೆ ಸಲ್ಲುತ್ತದೆ ಎಂದು ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಪಿ.ಶೆಣೈ ಹೇಳಿದ್ದಾರೆ. ಅವರು ಕಾರ್ಕಳ, ಬಂಟ್ವಾಳ, ಉಳ್ಳಾಲ, ಕುಂದಾಪುರ ಪುರಸಭೆಗಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ನಾಗರಿಕರ ಪರವಾಗಿ ಕಾರ್ಕಳ ಹೊಸಸಂಜೆ ಬಳಗವು ಅನಂತಶಯನದ ಹೊಟೇಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಿದ ಸಾರ್ವಜನಿಕ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಪುರಸಭೆಯ ವಿವಿಧ ಜವಾಬ್ದಾರಿಗಳನ್ನು ೪೦ ವರ್ಷಗಳ ಸರಕಾರಿ ಸೇವೆಯಲ್ಲಿ ಶಕ್ತಿಮೀರಿ ನಿರ್ವಹಿಸಿದ್ದೇನೆ. ಇದೀಗ ನಿವೃತ್ತನಾಗಿದ್ದರೂ ಜನರ ಕಷ್ಟಸುಖಗಳಿಗೆ ನಿರಂತರವಾಗಿ ಸ್ಪಂಧಿಸುವ ಕೆಲಸ ಮಾಡುತ್ತೇನೆ. ಕಾರ್ಕಳದ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಸಲಹೆ, ಸೂಚನೆ, ಮಾರ್ಗದರ್ಶನ ಸದಾ ಇರುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಸುರೇಶ್ ಕುಡ್ವ, ಲಯನ್ಸ್ ಕ್ಲಬ್ ಅಧ್ಯಕ್ಷ ಸಚೀಂದ್ರ ಶೆಟ್ಟಿ, ಚಾರ್ಟರ್ಡ್ ಇಂಜಿನಿಯರ್ ಶ್ರೀನಿವಾಸ ಜಿ.ಕೆ.ಪೈ, ಸಮಾಜ ಸೇವಕಿ ನಿರ್ಮಲಾ ಪೈ, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷರುಗಳಾದ ಶೋಭಾ ದೇವಾಡಿಗ, ಸುಭಿತ್ ಎನ್.ಆರ್., ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕದ ಅಧ್ಯಕ್ಷ ಮಹಮ್ಮದ್ ಗೌಸ್, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರಪಾಲ್, ಹಿರಿಯ ಪತ್ರಕರ್ತ ಕೆ.ಪದ್ಮಾಕರ ಭಟ್ ಶುಭ ಹಾರೈಸಿದರು. ನಂದಿತಾ ಯೋಗೀಶ್ ಕಿಣಿ ಪ್ರಾರ್ಥಿಸಿದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್.ದೇವರಾಯ ಪ್ರಭು ಸ್ವಾಗತಿಸಿದರು. ಪ್ರಜ್ವಲಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಆದ್ಯಾ ಪುರಾಣಿಕ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.