



ಬಿಹಾರದಲ್ಲಿ ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ 16 ಕಡೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಉಪ್ಪಿಂನಗಡಿ, ವೇಣೂರು ಸೇರಿದಂತೆ 16 ಕಡೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವರ ಮನೆ, ಕಚೇರಿ, ಆಸ್ಪತ್ರೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಎನ್ ಐಎ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಮಾರ್ಚ್ ತಿಂಗಳಲ್ಲಿ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ದಾಳಿ ನಡೆಸಿದ್ದರು. ವಿಧ್ವಂಸಕ ಕೃತ್ಯ ಎಸಗಲು ಹಣಕಾಸಿನ ನೆರವು ಒದಗಿಸಿರಬಹುದು ಎಂಬ ಗುಮಾನಿಯ ಮೇರೆಗೆ ಬಂಟ್ವಾಳ ಮೂಲದ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಎಂಬ ನಾಲ್ವರ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದರು. ಪ್ರಧಾನಿ ಮೋದಿ ಕಾರ್ಯಕ್ರಮವನ್ನು ವಿಫಲಗೊಳಿಸಲು ಸಂಚು ನಡೆಸಿರುವವರ ಜೊತೆ ಈ ನಾಲ್ವರು ಸಂಪರ್ಕ ಹೊಂದಿದ್ದು, ಹಣಕಾಸು ನೆರವು ಒದಗಿಸಿದ್ದಾರೆ ಎಂಬ ಆರೋಪದಡಿ ದಾಳಿ ನಡೆದಿತ್ತು. ಕೃತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವೂ ಸಹ ಇವರ ಮೇಲಿದೆ ಎಂದು ಹೇಳಲಾಗಿತ್ತು. ಇನ್ನು ದಾಳಿ ವೇಳೆ ನಂದಾವರಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಂದಾವರದ ವ್ಯಕ್ತಿಯೊಬ್ಬರು ಹಣಕಾಸಿನ ನೆರವು ನೀಡಿದ ಮೂಲ ಹಾಗೂ ವಿವರಗಳನ್ನು ಪಡೆದುಕೊಳ್ಳಲು ದಾಳಿ ನಡೆದಿತ್ತು. ಮೂವರ ವಿಚಾರಣೆ ನಡೆಸಲಾಗಿತ್ತು. ಇವರಲ್ಲಿ ಒಬ್ಬರು ದುಬೈನಿಂದ ಕಳೆದ ವರ್ಷ ಊರಿಗೆ ಮರಳಿದ್ದರು. ಉಳಿದವರು ಮೆಲ್ಕಾರ್ನಲ್ಲಿ ಪಾಸ್ ಪೋರ್ಟ್ ವ್ಯವಹಾರ ಮಾಡಿಕೊಂಡಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.