logo
WhatsApp Image 2026-04-02 at 14.46.04.jpeg
hindalco everlast.jpeg

ವಿಮಾನ ಪತನಕ್ಕೆ ಜುಲೈನಲ್ಲೇ ಸಂಚು: ಫ್ಲೈದುಬೈ ಸಹ-ಪೈಲಟ್‌ನಿಂದ ಸ್ಫೋಟಕ ಮಾಹಿತಿ

ಟ್ರೆಂಡಿಂಗ್
share whatsappshare facebookshare telegram
5 Oct 2026
post image

ಅಬುಧಾಬಿ:** ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಒಮಾನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಜುಲೈನಲ್ಲೇ ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ. ಯುಎಇ ತನಿಖಾಧಿಕಾರಿಗಳ ವಿಚಾರಣೆ ವೇಳೆ ಬಂಧಿತ ಹಮಾಮ್ ಈ ವಿಚಾರಗಳನ್ನು ಬಾಯ್ಬಿಟ್ಟಿರುವುದಾಗಿ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.

ಭಾರತ ಮೂಲದ ಮುಖ್ಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಹತ್ಯೆಗೈದು, ಯಾವುದೇ ಅನುಮಾನ ಮೂಡದಂತೆ ವಿಮಾನದ ಲ್ಯಾಂಡಿಂಗ್‌ಗೆ ಅನುಮತಿ ಪಡೆಯುವುದು ಹಾಗೂ ಕೊನೆಯ ಕ್ಷಣದಲ್ಲಿ ವಿಮಾನ ನಿಲ್ದಾಣದ ಕಟ್ಟಡ ಅಥವಾ ನೆಲದಲ್ಲಿದ್ದ ಮತ್ತೊಂದು ವಿಮಾನಕ್ಕೆ ವಿಮಾನವನ್ನು ಅಪ್ಪಳಿಸುವುದು ಆತನ ಸಂಚಾಗಿತ್ತು ಎಂದು ತಿಳಿದುಬಂದಿದೆ.

ಇಸ್ರೇಲ್ ಪ್ರವೇಶಿಸುವ ಮುನ್ನ ಜೋರ್ಡಾನ್ ವಾಯುಪ್ರದೇಶದಲ್ಲಿರುವಾಗಲೇ ಮುಖ್ಯ ಪೈಲಟ್ ಮೇಲೆ ಮಾರಣಾಂತಿಕ ದಾಳಿ ನಡೆಸಲು ಹಮ್ಮಾಮಿ ಯೋಜಿಸಿದ್ದ. ವಿಮಾನವನ್ನು ತಡೆಯಲು ಭದ್ರತಾ ಪಡೆಗಳಿಗೆ ಯಾವುದೇ ಸಮಯ ಸಿಗದಂತೆ ಕೊನೆಯ ಕ್ಷಣದವರೆಗೂ ತನ್ನ ಯೋಜನೆಯನ್ನು ರಹಸ್ಯವಾಗಿಡುವುದು ಆತನ ಉದ್ದೇಶವಾಗಿತ್ತು ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

ವಿಮಾನ ನಿಲ್ದಾಣಕ್ಕೆ ಅಪ್ಪಳಿಸಲು ಸಾಧ್ಯವಾಗದಿದ್ದರೆ ಟೆಲ್ ಅವಿವ್‌ನ ಗಗನಚುಂಬಿ ಕಟ್ಟಡವೊಂದಕ್ಕೆ ಅಥವಾ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳಿಗೆ ವಿಮಾನವನ್ನು ಅಪ್ಪಳಿಸುವ ಪರ್ಯಾಯ ಯೋಜನೆಯನ್ನೂ ಆತ ಹೊಂದಿದ್ದ ಎಂದು ಇಸ್ರೇಲ್‌ನ ಚಾನೆಲ್ 12 ವರದಿ ಮಾಡಿದೆ.

ಜುಲೈನಲ್ಲೇ ದಾಳಿ ನಡೆಸಲು ಹಮ್ಮಾಮಿ ಯೋಜಿಸಿದ್ದ. ಆದರೆ ಅಂದು ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರು ತನ್ನ ಸ್ನೇಹಿತರಾಗಿದ್ದ ಕಾರಣ ಕೊನೆಯ ಕ್ಷಣದಲ್ಲಿ ಯೋಜನೆಯನ್ನು ಮುಂದೂಡಿದ್ದ ಎಂದು ವರದಿಯಾಗಿದೆ. ಫ್ಲೈದುಬೈ ಸೇರಿದ ಬಳಿಕ ಆತ ಹಲವು ಬಾರಿ ಬೆನ್ ಗುರಿಯಾನ್ ವಿಮಾನ ನಿಲ್ದಾಣಕ್ಕೆ ಹಾರಾಟ ನಡೆಸಿದ್ದ. ಜೂನ್‌ನಲ್ಲಿ ಇಸ್ರೇಲ್‌ಗೆ ತೆರಳಿದ್ದ ಸಂದರ್ಭದಲ್ಲಿ ದಾಳಿಗೆ ಅಗತ್ಯವಾದ ಮಾಹಿತಿ ಸಂಗ್ರಹಿಸಿ ಯೋಜನೆ ರೂಪಿಸಲು ಸಮಯ ಮೀಸಲಿಟ್ಟಿದ್ದ ಎನ್ನಲಾಗಿದೆ.

ದಾಳಿಯ ಉದ್ದೇಶದಿಂದಲೇ ಫ್ಲೈದುಬೈ ಏರ್‌ಲೈನ್ಸ್‌ಗೆ ಸೇರ್ಪಡೆಯಾಗಿದ್ದಾಗಿ ಹಮ್ಮಾಮಿ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಟೆಲ್ ಅವಿವ್‌ಗೆ ಯಾವ ವಿಮಾನಯಾನ ಸಂಸ್ಥೆಗಳು ಹಾರಾಟ ನಡೆಸುತ್ತವೆ ಎಂಬುದನ್ನು ಮೊದಲೇ ಪರಿಶೀಲಿಸಿದ್ದೆ. ಅದಕ್ಕಾಗಿಯೇ ಫ್ಲೈದುಬೈ ಆಯ್ಕೆ ಮಾಡಿಕೊಂಡಿದ್ದೆ ಹಾಗೂ ಉದ್ಯೋಗಕ್ಕೆ ಸೇರುವ ಮೊದಲೇ ದಾಳಿಯ ಯೋಜನೆ ರೂಪಿಸಿದ್ದೆ ಎಂದು ಆತ ಹೇಳಿರುವುದಾಗಿ ವರದಿಯಾಗಿದೆ.

ಮುಖ್ಯ ಪೈಲಟ್ ಮೇಲೆ ದಾಳಿ ನಡೆಸಿದ ಬಳಿಕ ಸಹ-ಪೈಲಟ್ ವಿಮಾನದ ಎಂಜಿನ್‌ಗಳನ್ನು ಆಫ್ ಮಾಡಿ ರಡ್ಡರ್‌ಗಳನ್ನು ಮುಂದಕ್ಕೆ ತಳ್ಳಿದ್ದ ಎನ್ನಲಾಗಿದೆ. ಪರಿಣಾಮ ವಿಮಾನವು ಶಬ್ದದ ವೇಗದತ್ತ ಸಾಗುತ್ತಾ ಕೇವಲ ಒಂದು ನಿಮಿಷದಲ್ಲಿ ಸುಮಾರು 16,000 ಅಡಿ ಕೆಳಕ್ಕೆ ಕುಸಿದಿತ್ತು ಎಂದು ವರದಿಯಾಗಿದೆ.

ಪ್ರಕರಣದ ತನಿಖೆ ಮುಂದುವರಿದಂತೆ ಹಲವು ಗಂಭೀರ ಭದ್ರತಾ ಲೋಪಗಳೂ ಬೆಳಕಿಗೆ ಬರುತ್ತಿವೆ. ಹಮ್ಮಾಮಿಯ ತೀವ್ರಗಾಮಿ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಆತನ ಸ್ವದೇಶ ಒಮಾನ್‌ನಲ್ಲಿ ವಿಮಾನ ಹಾರಾಟ ನಡೆಸದಂತೆ ನಿಷೇಧ ಹೇರಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವಿಲ್ಲದ ಒಮಾನ್‌ನ ಪ್ರಜೆಯೊಬ್ಬರಿಗೆ ಇಸ್ರೇಲಿ ಪ್ರಯಾಣಿಕರು ಇದ್ದ ವಿಮಾನವನ್ನು ಹಾರಿಸಲು ಹೇಗೆ ಅವಕಾಶ ನೀಡಲಾಯಿತು ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.

29 ವರ್ಷದ ಹಮಾಮ್ ಅಲ್-ಹಮ್ಮಾಮಿಯ ತಂದೆ ಒಮಾನ್ ಮೂಲದವರಾಗಿದ್ದು, ತಾಯಿ ಸಿರಿಯಾ ಮೂಲದವರು. ಸಿರಿಯಾ ಅಂತರ್ಯುದ್ಧದ ಅವಧಿಯಲ್ಲಿ ಅಲ್ಲಿಯೇ ವಾಸಿಸಿದ್ದ ಹಮ್ಮಾಮಿ ಸಾಮಾಜಿಕ ಜಾಲತಾಣಗಳಲ್ಲಿ ಅಲ್-ಖೈದಾ ಪರವಾಗಿ ಪೋಸ್ಟ್‌ಗಳನ್ನು ಮಾಡುತ್ತಿದ್ದ ಎನ್ನಲಾಗಿದೆ. ಇಷ್ಟೆಲ್ಲ ಹಿನ್ನೆಲೆಯಿದ್ದರೂ ಫ್ಲೈದುಬೈ ಸಂಸ್ಥೆ ಆತನನ್ನು ಭದ್ರತಾ ಅಪಾಯವೆಂದು ಗುರುತಿಸುವಲ್ಲಿ ಹೇಗೆ ವಿಫಲವಾಯಿತು ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ.

ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸಂಬಂಧಿಸಿದ ಮಾಹಿತಿಯನ್ನು ಎಮಿರೇಟ್ಸ್ ಅಧಿಕಾರಿಗಳು ಮೊದಲೇ ಹಂಚಿಕೊಂಡಿದ್ದರೂ ಇಸ್ರೇಲ್ ಭದ್ರತಾ ಸಂಸ್ಥೆಗಳು ಯಾವುದೇ ಎಚ್ಚರಿಕೆ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನ ಆಂತರಿಕ ಭದ್ರತಾ ಸಂಸ್ಥೆ ‘ಶಿನ್ ಬೆಟ್’ ಮತ್ತು ಸಾರಿಗೆ ಸಚಿವಾಲಯದ ನಡುವೆ ಭದ್ರತಾ ಲೋಪದ ಜವಾಬ್ದಾರಿ ಕುರಿತು ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.