



ಮಾಸ್ಕೊ: ರಷ್ಯಾದ ಟಿವೆರ್ ಪ್ರಾಂತ್ಯದಲ್ಲಿ ಬುಧವಾರ ಖಾಸಗಿ ವಿಮಾನ ಪತನವಾಗಿದ್ದು, ಈ ದುರಂತದಲ್ಲಿ ವಾಗ್ನರ್ ಗ್ರೂಪ್ ಖಾಸಗಿ ಸೇನೆ ಮುಖ್ಯಸ್ಥ ಯವ್ಗೆನಿ ಪ್ರಿಗೋಷಿನ್ ಸೇರಿ ವಿಮಾನದಲ್ಲಿದ್ದ ಎಲ್ಲ ಹತ್ತು ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ರಷ್ಯಾ ಸರ್ಕಾರದ ಮಾಧ್ಯಮ ಸಂಸ್ಥೆ TASS ವರದಿ ಮಾಡಿದೆ. ಆದರೆ, ಪ್ರಿಗೋಷಿನ್ ಸಾವಿನ ಬಗ್ಗೆ ಖಚಿತತೆ ಇನ್ನಷ್ಟೇ ತಿಳಿಯಬೇಕಿದೆ. ಪ್ರಿಗೋಷಿನ್ ಅವರು ಈ ವಿಮಾನದಲ್ಲಿದ್ದರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ
ವಾಗ್ನರ್ ಗ್ರೂಪ್ ಖಾಸಗಿ ಸೇನೆ ಮುಖ್ಯಸ್ಥ 64 ವರ್ಷದ ಯವ್ಗೆನಿ ಪ್ರಿಗೋಷಿನ್ ಕಳೆದ ಜೂನ್‌ನಲ್ಲಿ ರಷ್ಯಾ ಸೇನೆ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಎದ್ದಿದ್ದರು. 25 ಸಾವಿರಕ್ಕೂ ಹೆಚ್ಚು ಬಲಿಷ್ಠ ಹೋರಾಟಗಾರರನ್ನು ಹೊಂದಿರುವ ಈ ಖಾಸಗಿ ಪಡೆಯನ್ನು ಪುಟಿನ್ ಪರಮಾಪ್ತ ಎಂದೇ ಗುರುತಿಸಿಕೊಂಡಿದ್ದ ಯವ್ಗೆನಿ ಪ್ರಿಗೋಷಿನ್ ಹುಟ್ಟುಹಾಕಿದ್ದರು.
‘ಮಾಸ್ಕೊದಿಂದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಎಂಬ್ರೇಯರ್ ಲೆಗಸಿ ವಿಮಾನವು ಟಿವೆರ್ ಪ್ರದೇಶದ ಕುಜೆಂಕಿನೋ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಎಂಟು ಶವಗಳು ಸಿಕ್ಕಿವೆ’ ಎಂದು ರಷ್ಯಾದ ತುರ್ತುಸ್ಥಿತಿ ಸಚಿವಾಲಯ ಹೇಳಿದೆ.
‘ವ್ಯಾಗ್ನರ್’ ದಂಗೆ ಮತ್ತು ಶಮನದ ಬಳಿಕ ಪ್ರಿಗೋಷಿನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಅವರು ಎಲ್ಲಿದ್ದಾರೆ ಎನ್ನುವುದೂ ನಿಗೂಢವಾಗಿತ್ತು. ಆದರೆ, ಆಫ್ರಿಕಾದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುವಂತೆ ಸ್ಪಷ್ಟವಾಗಿ ಕಾಣಿಸುವ ವಿಡಿಯೊವೊಂದು ಸೋಮವಾರವಷ್ಟೇ ಪ್ರಸಾರವಾಗಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.