


ಕಾರ್ಕಳ: ನೂರಾಳ್ ಬೆಟ್ಟು ಗ್ರಾಮದ ಕನ್ಯಾಲು ಹಾಡಿಗೆ ಸಂಪರ್ಕ ಕಲ್ಪಿಸುವ ಕಂಪೆಟ್ಟು–ಕನ್ಯಾಲು ಸೇತುವೆ ನಿರ್ಮಾಣ ಹಾಗೂ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಗೆ ಅರಣ್ಯ ಹಕ್ಕು ಕಾಯ್ದೆ–2006ರ ಸೆಕ್ಷನ್ 3(2)ರಡಿ ಅನುಮತಿ ಕಲ್ಪಿಸುವಂತೆ ನೂರಾಳ್ ಬೆಟ್ಟು ಮಲೆಕುಡಿಯ ಸಂಘದ ವತಿಯಿಂದ ಈದು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾರ್ಕಳ ತಾಲೂಕಿನ ಈದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾಳ್ ಬೆಟ್ಟು ಗ್ರಾಮದ ಕನ್ಯಾಲು ಹಾಡಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 11 ಮಲೆಕುಡಿಯ ಕುಟುಂಬಗಳು ತಲತಲಾಂತರಗಳಿಂದ ವಾಸಿಸುತ್ತಿವೆ. ಆದರೆ, ಈ ಪ್ರದೇಶಕ್ಕೆ ಸೂಕ್ತ ರಸ್ತೆ ಹಾಗೂ ಸೇತುವೆ ಸಂಪರ್ಕದ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ನಿವಾಸಿಗಳು ಹಲವು ವರ್ಷಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ವಿಶೇಷವಾಗಿ ಶಾಲಾ ಮಕ್ಕಳ ಸಂಚಾರ, ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವುದು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ಸಾಗಿಸುವುದಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಮಳೆಗಾಲದಲ್ಲಂತೂ ಸಂಚಾರ ಮತ್ತಷ್ಟು ಕಷ್ಟಕರವಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿವಾಸಿಗಳ ದೈನಂದಿನ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಕುಟುಂಬಗಳ ಅನುಕೂಲ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಕಂಪೆಟ್ಟು–ಕನ್ಯಾಲು ಸೇತುವೆ ನಿರ್ಮಾಣ ಮತ್ತು ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವ ಅಗತ್ಯವಿದೆ. ಆದ್ದರಿಂದ ಅರಣ್ಯ ಹಕ್ಕು ಕಾಯ್ದೆ–2006ರ ಸೆಕ್ಷನ್ 3(2)ರ ಅನ್ವಯ ಅಗತ್ಯ ಅನುಮತಿ ದೊರಕಿಸಲು ಹಾಗೂ ಸಂಬಂಧಪಟ್ಟ ಇಲಾಖೆಗೆ ಶಿಫಾರಸು ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸಂಘದ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ನೂರಾಳ್ ಬೆಟ್ಟು ಮಲೆಕುಡಿಯ ಸಂಘದ ನಿಯೋಗದ ಸದಸ್ಯರಾದ ಡೀಕಯ್ಯ ಗೌಡ ಕನ್ಯಾಲು, ದಿನೇಶ್ ಗೌಡ, ಸುಧಾಕರ ಗೌಡ, ರಾಘವೇಂದ್ರ, ಸತೀಶ್, ಗುಲಾಬಿ, ಚಿನ್ನಮ್ಮ, ರೂಪ, ಭಾಸ್ಕರ ಗೌಡ, ಗಣೇಶ್ ಹಾಗೂ ಲಕ್ಷ್ಮಣ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.