



ಉಡುಪಿ: ತಾವು ನಾಲ್ಕನೇ ಬಾರಿಗೆ ಪರ್ಯಾಯ ಪೀಠ ಅಲಂಕರಿಸುತ್ತಿದ್ದು ಸನ್ಯಾಸ ಆಶ್ರಮ ಪೊರೈಸಿ 50 ವರ್ಷಗಳ ಸಂದ ಹಿನ್ನಲೆಯಲ್ಲಿ ಕೃಷ್ಣನಿಗೆ ಚಿನ್ನದ ರಥ ಸಮರ್ಪಿಸುವ ಸಂಕಲ್ಪ ಹೊಂದಿದ್ದೇನೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಬೆಳಿಗ್ಗೆ ಪರ್ಯಾಯ ಪೀಠಾರೋಹಣ ನಡೆಸಿ ಬಳಿಕ ನಡೆದ ಸಾರ್ವಜನಿಕ ದರ್ಬಾರ್ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ವಿದೇಶ ಪ್ರವಾಸಕ್ಕಿಂತ ಕೃಷ್ಣ ಪೂಜೆಯೇ ಮುಖ್ಯವಾಗಿದ್ದು ಈ ವರ್ಷಗಳ ಪರ್ಯಾಯದ ಅವಧಿಯಲ್ಲಿ ಸಂಪೂರ್ಣವಾಗಿ ಸಮಯವನ್ನು ಕೃಷ್ಣನ ಪೂಜೆಗೆ ಮೀಸಲಿಡುವೆ. ಈ ಬಾರಿಯ ಪುತ್ತಿಗೆ ಪರ್ಯಾಯ ವಿಶ್ವ ಗೀತಾ ಪರ್ಯಾಯವಾಗಿರಲಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಮಾತನಾಡಿ ಉಡುಪಿ ಕೃಷ್ಣ ಮಠ ಸಾಮಾಜಿಕವಾಗಿ ಧಾರ್ಮಿಕವಾಗಿ ತೊಡಗಿಸಿಕೊಂಡ ಕೇಂದ್ರವಾಗಿದ್ದು ಪುತ್ತಿಗೆ ಮಠದ ಪರ್ಯಾಯದಲ್ಲಿ ಭಾಗಿಯಾಗಿರೋದು ಪುಣ್ಯದ ಕೆಲಸ. ಪುತ್ತಿಗೆ ಶ್ರೀಗಳು ಧಾರ್ಮಿಕವಾಗಿ ದೇಶ ವಿದೇಶದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಧಾರ್ಮಿಕ ಕೇಂದ್ರಗಳಿಗೆ ಸಮಾಜವನ್ನು ತಿದ್ದುವ ಶಕ್ತಿಯಿದ್ದು, ಸಮಾಜ ಒಡೆದು ಹೋಗುವ ಸಂದರ್ಭದಲ್ಲಿ ಮಠಾಧೀಶರು ಜೋಡಿಸಬೇಕು. ಈ ಮೂಲಕ ರಾಜ್ಯ ದೇಶದಲ್ಲಿ ಸಾಮರಸ್ಯ ಬೆಳೆಯಲು ಮಠಗಳು ದಾರಿದೀಪವಾಗಬೇಕು ಎಂದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಮಾತನಾಡಿ ಸುಗುಣೇಂದ್ರ ತೀರ್ಥರು ಕೃಷ್ಣನ ಸಂದೇಶವನ್ನು ವಿದೇಶದಲ್ಲಿ ಪ್ರಸಾರ ಮಾಡುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಪೂರ್ವ ದೇಶದಿಂದ ಹೋಗಿ ಪಶ್ಚಿಮದವರಿಗೆ ಭಾರತಿಯತೆಯ ದರ್ಶನ ಮಾಡಿಸಿದ್ದಾರೆ. ಭಾರತೀಯತೆಯನ್ನು ವಿಶ್ವದೆಲ್ಲೆಡೆ ಪಸರಿಸಿ ಗೀತಾ ಸಂದೇಶ ಸಾರಿದ್ದಾರೆ. ವಿದೇಶದಲ್ಲಿ ರಾಮ ಮತ್ತು ಕೃಷ್ಣರ ನಾಮ ಅನುರಣಿಸುತ್ತಿದ್ದು, ಶಿವ ಕೃಷ್ಣನ ನಡುವೆ ಹೂವಿನ ಕುಸುಮದಷ್ಟೇ ವ್ಯತ್ಯಾಸ.ಎಲ್ಲಾ ದೇವರುಗಳೊಂದೇ ಭಕ್ತಿ ಇಮ್ಮಡಿಯಾಗಲಿ ಎಂದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ ಪೂರ್ವ ಜನ್ಮದ ಪುಣ್ಯದ ಫಲದಿಂದ ಪರ್ಯಾಯದಲ್ಲಿ ಭಾಗಿಯಾದ್ದು, ಇದೇ ವೇಳೆ ಅಯೋಧ್ಯೆ ಯಲ್ಲಿ ರಾಮನ ಲೋಕಾರ್ಪಣೆ ಆಗುತ್ತಿದೆ. ಉಡುಪಿಯಲ್ಲಿ ಪುತ್ತಿಗೆ ಪರ್ಯಾಯ ಮೂಲಕ ಕೃಷ್ಣ ಪೂಜೆ ಆಗಲಿದೆ. ಎರಡು ಧಾರ್ಮಿಕ ಕಾರ್ಯಕ್ರಮ ಜೊತೆ ಜೊತೆಗೇ ನಡೆಯುತ್ತಿರೋದು ಸಂತಸವಾಗಿದೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಪುತ್ತಿಗೆ ಸ್ವಾಮೀಜಿ ಕಟ್ಟಲೆಗಳನ್ನು ದಾಡಿ ವಿಶ್ವಕ್ಕೆ ಕೃಷ್ಣನ ಪರಿಚಯಿಸಿದರು. ಉಡುಪಿ ಪರ್ಯಾಯ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಮಾದರಿಯಾಗಿದ್ದು ಗದ್ದಲ ಗೊಂದಲ ಸಂಘರ್ಷ ಬೇಸರ ಇಲ್ಲದ ಅಧಿಕಾರ ಹಸ್ತಾಂತರ ಆಗುತ್ತದೆ. ಉತ್ತರದ ರಾಮ ದಕ್ಷಿಣದ ಕೃಷ್ಣ ಭಾರತವನ್ನು ಜೋಡಣೆ ಮಾಡಿದ್ದಾರೆ ಅಯೋಧ್ಯಾ ಬಾಲರಾಮನ ಪ್ರತಿಷ್ಟಾಪನೆ ಗೆ ಎಲ್ಲರೂ ಆಶೀರ್ವಾದಿಸಿ ಎಂದರು. ಹಿರಿಯ ವಿದ್ವಾಂಸ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ, ವಿದ್ವಾನ್ ಕೇಶವ ರಾವ್ ತಾಡಪತ್ರಿ, ವಿದ್ವಾನ್ ಡಾ.ಎನ್.ವೆಂಕಟೇಶಾಚಾರ್ಯ, ಹಿರಿಯ ಸಂಶೋಧಕರಾದ ಶತೌಧನಿ ವಿದ್ವಾನ್ ರಾಮನಾಥ ಆಚಾರ್ಯ, ಖ್ಯಾತ ಜ್ಯೋತಿಷಿ ವಿದ್ವಾನ್ ಬೇಳ ಪದ್ಮನಾಭ ಶರ್ಮ, ಇಸ್ಕಾನ್ ಅಧ್ಯಕ್ಷ ಮಧು ಪಂಡಿತದಾಸ್, ಮಣಿಪಾಲ ದಾಸ್ ಆಸ್ಪತ್ರೆಯ ಅಧ್ಯಕ್ಷ ಡಾ. ಪೈ, ಹಿರಿಯ ವಕೀಲರಾದ ಅಶೋಕ್ ಹಾರ್ನಹಳ್ಳಿ, ಕೋಕಿಲಾ ವೇಮುರಿ, ಮಹಾಂತೇಶ ಸಣ್ಣನವರ್ ಅವರನ್ನು ಮಠದ ಪರವಾಗಿ ಸನ್ಮಾನಿಸಲಾಯಿತು.
ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ನ್ಯೂ ಬೌನ್ಸಿಕ್ ಸ್ಟೇಟ್ ಕೆನಡಾ ಶಾಸಕ ಬೆಂವ ಬೋರ್ಕಿ, ಎಂಎಲ್ ಸಿಗಳಾದ ಮಂಜುನಾಥ ಭಂಡಾರಿ, ಭೋಜೇಗೌಡ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಪಸಾದ್ ರಾಜ್ ಕಾಂಚನ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ರಘುಪತಿ ಭಟ್, ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ, ಹಾಗೂ ಸಹಸ್ರಾರು ಶ್ರೀಕೃಷ್ಣ ಭಕ್ತರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.