



ಬೆಂಗಳೂರು : ರಾಜ್ಯದ ಶಾಲಾ- ಕಾಲೇಜುಗಳ ಆವರಣದಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳ ಸ್ಥಳಾಂತರಕ್ಕೆ ಇಂಧನ ಇಲಾಖೆ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ೧೭೮೩ ಅಪಾಯಕಾರಿ ಮಾರ್ಗಗಳನ್ನು ತೆರವುಗೊಳಿಸಿ ಹೊಸ ಮಾರ್ಗಕ್ಕೆ ವ್ಯವಸ್ಥೆ ಕಲ್ಪಿಸಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿರುವ ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಸಚಿವ ವಿ.ಸುನೀಲ್ ಕುಮಾರ್, ಬಾಕಿ ಉಳಿದಿರುವ ಅಪಾಯಕಾರಿ ಮಾರ್ಗಗಳ ಬದಲಾವಣೆಯನ್ನು ಅತಿ ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಳೆದ ಆಗಷ್ಟ್ ೧೫ರಂದು ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನಡೆಸುವಾಗ ಶಾಲಾ ಆವರಣದಲ್ಲಿ ಹಾದು ಹೋಗಿದ್ದ ಅಪಾಯಕಾರಿ ವಿದ್ಯುತ್ ಮಾರ್ಗಕ್ಕೆ ಧ್ವಜ ತಗುಲಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದರು. ಹಾಸನದಲ್ಲೂ ಇದೇ ಬಗೆಯ ಘಟನೆ ನಡೆದಿತ್ತು. ಶಾಲಾ- ಕಾಲೇಜು ಆವರಣದಲ್ಲಿ ಹಾದಿ ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ರಾಜ್ಯಾದ್ಯಂತ ಕಳವಳ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದ ಸಚಿವ ಸುನೀಲ್ ಕುಮಾರ್ ತುರ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಶಾಲಾ- ಕಾಲೇಜು ಆವರಣದಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗ ಗುರುತಿಸಿ ಬದಲಿ ಮಾರ್ಗ ಕಲ್ಪಿಸುವ ಅಥವಾ ಎಬಿ ಕೇಬಲ್ ಅಳವಡಿಸುವಂತೆ ಆಗಷ್ಟ್ ೧೯ ರಂದು ಎಲ್ಲ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಪತ್ರ ಬರೆದು ಸೂಚನೆ ನೀಡಲಾಗಿತ್ತು. ರಾಜ್ಯದಲ್ಲಿ ಒಟ್ಟು ೬೮೮೬ ಇಂಥ ಅಪಾಯಕಾರಿ ಮಾರ್ಗಗಳು ಶಾಲಾ- ಕಾಲೇಜು ಆವರಣದಲ್ಲಿ ಹಾದು ಹೋಗಿರುವುದನ್ನು ಗುರುತಿಸಲಾಗಿದ್ದು, ಆದೇಶ ನೀಡಿದ ಮೂರೇ ತಿಂಗಳಲ್ಲಿ ೧೭೮೩ ಮಾರ್ಗಗಳನ್ನು ಬದಲಿಸಿ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನುಳಿದ ೪೯೯೭ ಮಾರ್ಗಗಳ ಬದಲಾವಣೆ ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ದಿನದಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ ೧೧೪.೫೦ ಕೋಟಿ ರೂ.ನ್ನು ಇಂಧನ ಇಲಾಖೆ ವೆಚ್ಚ ಮಾಡುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲೇ ಇಂಥ ಅತಿ ಹೆಚ್ಚು ಮಾರ್ಗಗಳು ಕಂಡು ಬಂದಿದ್ದು ೨೨೯೯ ಸ್ಥಳ ಗುರಿತಿಸಲಾಗಿದೆ. ಈ ಪೈಕಿ ೧೫೭ ಕಡೆ ಹೊಸ ಮಾರ್ಗ ಅಳವಡಿಸಲಾಗಿದ್ದು, ೨೧೪೭ ಮಾರ್ಗ ಬದಲಾವಣೆ ಪ್ರಗತಿಯಲ್ಲಿದೆ. ಚೆಸ್ಕಾಂ ವ್ಯಾಪ್ತಿಯ ೮೮೧ರ ಪೈಕಿ ೮೦೯, ಮೆಸ್ಕಾಂನ ೧೩೨೩ ರ ಪೈಕಿ ೧೧೬, ಹೆಸ್ಕಾಂನ ೧೭೨೧ರ ಪೈಕಿ ೨೨೮ ಹಾಗೂ ಜೆಸ್ಕಾಂ ವ್ಯಾಪ್ತಿಯ ೬೬೨ರ ಪೈಕಿ ೪೭೩ ಅಪಾಯಕಾರಿ ಮಾರ್ಗಗಳನ್ನು ಸರಿಪಡಿಸಲಾಗಿದ್ದು, ೪೯೯೭ ಮಾರ್ಗಗಳಿಗೆ ಸದ್ಯದಲ್ಲೇ ಕಾಯಕಲ್ಪ ಸಿಗಲಿದೆ. ಇಂಧನ ಇಲಾಖೆಯ ಈ ಕ್ರಮದಿಂದ ವಿದ್ಯಾರ್ಥಿಗಳು , ಶಿಕ್ಷಕರು ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ದಿನ ತುಮಕೂರಿನಲ್ಲಿ ನಡೆದ ಈ ಘಟನೆ ಎಲ್ಲರಲ್ಲೂ ಬೇಸರ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳ ಆವರಣದಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳ ಬದಲಾವಣೆಗೆ ಸೂಚನೆ ನೀಡಲಾಗಿತ್ತು. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಲಾಗುತ್ತಿದೆ. ಬಾಕಿ ಇರುವ ಮಾರ್ಗ ಬದಲಾವಣೆ ಕಾರ್ಯ ಕೆಲವೇ ದಿನದಲ್ಲಿ ಮುಕ್ತಾಯಗೊಳ್ಳುತ್ತದೆ. ಈ ಬಗ್ಗೆ ನಾನೇ ಖುದ್ದು ಪರಿಶೀಲನೆ ನಡೆಸಿದ್ದೇನೆ.
ವಿ.ಸುನೀಲ್ ಕುಮಾರ್, ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.