

ಬೆಂಗಳೂರು: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಅಕ್ಕಿ ಬೆಲೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಇದೀಗ ಕೊಂಚ ನೆಮ್ಮದಿ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ಬೆಲೆ ದಿಢೀರ್ ಇಳಿಕೆಯಾಗಿದ್ದು, ಪ್ರತಿ ಕೆಜಿಗೆ ₹10ರಿಂದ ₹20ರವರೆಗೆ ಕಡಿಮೆಯಾಗಿದೆ.
ಕೆಲವೇ ದಿನಗಳ ಹಿಂದೆ ಕೆಜಿಗೆ ₹80ರಿಂದ ₹90ರಂತೆ ಮಾರಾಟವಾಗುತ್ತಿದ್ದ ಸೋನಾ ಮಸೂರಿ ಅಕ್ಕಿ ಇದೀಗ ₹65ರಿಂದ ₹70ರ ದರದಲ್ಲಿ ಲಭ್ಯವಾಗುತ್ತಿದೆ. ಇದರಿಂದ ಅಕ್ಕಿ ಖರೀದಿಸುವ ಗ್ರಾಹಕರಿಗೆ ಕೊಂಚ ಆರ್ಥಿಕ ಹೊರೆ ಕಡಿಮೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಭತ್ತದ ಪೂರೈಕೆಯಲ್ಲಿ ಉಂಟಾಗಿದ್ದ ಕೊರತೆಯಿಂದ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ, ಇದೀಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಕಟಾವು ಕಾರ್ಯ ಪೂರ್ಣಗೊಂಡು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮಾರುಕಟ್ಟೆ ಹಾಗೂ ಅಕ್ಕಿ ಗಿರಣಿಗಳಿಗೆ ತಲುಪುತ್ತಿರುವುದರಿಂದ ದರ ಇಳಿಕೆಯಾಗಿದೆ.
ಒಂದು ಕ್ವಿಂಟಲ್ ಅಕ್ಕಿಯ ಬೆಲೆ ಈ ಹಿಂದೆ ಸುಮಾರು ₹8,500 ಇತ್ತು. ಇದೀಗ ₹6,500ಕ್ಕೆ ಇಳಿಕೆಯಾಗಿದ್ದು, ಕ್ವಿಂಟಲ್‌ಗೆ ಬರೋಬ್ಬರಿ ₹2,000 ಕಡಿಮೆಯಾಗಿದೆ.
ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಸಾವಿತ್ರಿ ಪುರುಷೋತ್ತಮ ಅವರು, ಅಕ್ಕಿ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಮತ್ತೊಂದೆಡೆ, ಭತ್ತ ಬೆಳೆದ ರೈತರಿಗೂ ಉತ್ತಮ ಬೆಲೆ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.
ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ಬೆಳೆಯ ಪ್ರಮಾಣ ಕಡಿಮೆಯಿದ್ದರೂ, ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದೆ. ಇದೀಗ ಕಟಾವು ಪೂರ್ಣಗೊಂಡಿರುವುದರಿಂದ ಮಾರುಕಟ್ಟೆಗೆ ಭತ್ತದ ಪೂರೈಕೆ ಹೆಚ್ಚಾಗಿದೆ. ಇದರಿಂದ ಅಕ್ಕಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಅವರು ವಿವರಿಸಿದ್ದಾರೆ.
ಆದರೆ, ಸರ್ಕಾರ ಅಕ್ಕಿ ದಾಸ್ತಾನು ಮಿತಿಯನ್ನು ಮತ್ತಷ್ಟು ಕಡಿಮೆ ಮಾಡಿದರೆ ಅಕ್ಕಿ ಗಿರಣಿಗಳಿಗೆ ತೊಂದರೆಯಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಾವಿತ್ರಿ ಪುರುಷೋತ್ತಮ ಎಚ್ಚರಿಸಿದ್ದಾರೆ. ಹೀಗಾಗಿ ಸರ್ಕಾರ ದಾಸ್ತಾನು ಮಿತಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೇಸಿಗೆಯಲ್ಲಿ ಹೊಸ ಭತ್ತದ ಬೆಳೆ ಮಾರುಕಟ್ಟೆಗೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ, ಪ್ರಸ್ತುತ ಸಂಗ್ರಹವಾಗಿರುವ ಭತ್ತವನ್ನೇ ಮುಂದಿನ ದಿನಗಳಲ್ಲಿ ಅವಲಂಬಿಸಬೇಕಾಗುತ್ತದೆ. ಈಗ ಸಂಗ್ರಹವಾಗುವ ಭತ್ತದ ದಾಸ್ತಾನನ್ನು ಬಳಸಿಕೊಂಡು ಅಕ್ಕಿ ಗಿರಣಿಗಳು ಮುಂದಿನ ಒಂದು ವರ್ಷದವರೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.