



ಕಾರ್ಕಳ :ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್(ರಿ ) ಶ್ರೀ ಕ್ಷೇತ್ರ ಧರ್ಮಸ್ಥಳ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ ) ಕಾರ್ಕಳ ತಾಲೂಕು. ಕೇಂದ್ರ ಆಯುಷ್ ಮಂತ್ರಾಲಯ ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆ ಹಾಗೂ ಕಾರ್ಕಳದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಏಪ್ರಿಲ್ 17ರಿಂದ 24ರವರೆಗೆ ಕಾರ್ಕಳ ತಾಲೂಕಿನ ನಗರ ಹಾಗೂ ಹಳ್ಳಿ ಹಳ್ಳಿಗಳ ನೂರಕ್ಕೂ ಹೆಚ್ಚು ಕೇಂದ್ರಗಳಲ್ಲಿ, ಏಕಕಾಲದಲ್ಲಿ ಅನುಭವಿ ಯೋಗ ಶಿಕ್ಷಕರಿಂದ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ 38ನೇ ಯೋಗಾಸನ ಪ್ರಾಣಾಯಾಮ ಧ್ಯಾನ ಬೇಸಿಗೆ ಯೋಗ ಶಿಬಿರ, ಯೋಗ ಪ್ರಾತ್ಯಕ್ಷಿಕೆ, ಆಸಕ್ತರಿಗೆ ಯೋಗಚಿಕಿತ್ಸೆ, ಶಿಕ್ಷಕರಿಗೆ ಯೋಗ ಕಾರ್ಯಗಾರ, ಹಾಗೂ ವಿದ್ಯಾರ್ಥಿಗಳಿಗಾಗಿ ತಾಲೂಕಿನ 2ಕಡೆಗಳಲ್ಲಿ ಪಂಚಮುಖೀ ವ್ಯಕ್ತಿತ್ವ ವಿಕಸನ ಮಕ್ಕಳ ಯೋಗ ಶಿಬಿರ ನಡೆಯಲಿದೆ. ಇದರಲ್ಲಿ ಚಿತ್ರಕಲೆ, ಕ್ರಾಫ್ಟ್, ಮುಖವಾಡ ತಯಾರಿ, ನೃತ್ಯ, ಯೋಗ, ನೀತಿಕಥೆ, ಶ್ಲೋಕ ಪಠಣ, ಮನೋರಂಜನಾ ಆಟಗಳು, ನೆನಪಿನ ಶಕ್ತಿ ಉದ್ದೀಪನಗೊಳಿಸುವ ಕಸರತ್ತುಗಳು, ಭಜನೆ ಮುಂತಾದ ವಿಷಯಗಳಲ್ಲಿ ಪರಿಣತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಯೋಗದಿಂದ ರೋಗಮುಕ್ತ ಎನ್ನುವ ಶೀರ್ಷಿಕೆಯೊಂದಿಗೆ, ಯೋಗದ ಮೂಲಕ ನೆಮ್ಮದಿ, ಸೌಖ್ಯ, ಕ್ಷೇಮ ನೀಡುವ ಮೂಲಕ, ಸರ್ವರಿಗೂ ಆರೋಗ್ಯ ನೀಡಿ, ವಿಶ್ವ ಶಾಂತಿಗೋಸ್ಕರ 2022ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಾಕಾರಗೊಳಿಸುವುದು ಇದರ ಉದ್ದೇಶವಾಗಿದೆ. ಕಾರ್ಯಕ್ರಮದ ಉದ್ಘಾಟನೆಯು ಕಾರ್ಕಳ ತಾಲೂಕಿನ ಪೆರ್ವಾಜೆ ರಸ್ತೆಯಲ್ಲಿರುವ ಶ್ರೀ ನಾರಾಯಣಗುರು ಸಭಾಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಸಮಾರೋಪ ಸಮಾರಂಭ ಮುದ್ರಾಡಿಯ ಗ್ರಾಮಾಭಿವೃದ್ಧಿ ಯೋಜನೆಯ ಸಭಾಭವನದಲ್ಲಿ ನಡೆಯಲಿದೆ ಎಂದು ಯೋಗ ನೈತಿಕ ಶಿಕ್ಷಣ ನಿರ್ದೇಶಕರಾದ ಡಾ.ಐ. ಶಶಿಕಾಂತ್ ಜೈನ್, ರಾಜ್ಯ ಯೋಗ ಸಂಘಟಕರಾದ ಶೇಖರ ಕಡ್ತಲ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಭಾಸ್ಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಯೋಗ ಶಿಬಿರ ನಡೆಸಲು ಆಸಕ್ತಿ ಇರುವ ಸಂಘ ಸಂಸ್ಥೆಗಳು ಗ್ರಾಮಾಭಿವೃದ್ದಿಯ ಯೋಜನೆಯ ಪ್ರತಿನಿಧಿಗಳನ್ನು ಅಥವಾ ಯೋಗ ಸಂಘಟಕ ಶೇಖರ್ ಕಡ್ತಲ 9480487081. ಇವರನ್ನು ಸಂಪರ್ಕಿಸಬಹುದು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.