



ಉಡುಪಿ:
ಸುರತ್ಕಲ್ ಟೋಲ್ ಗೇಟ್ ಸುಂಕ ವಸೂಲಾತಿಯಲ್ಲಿ ಗುತ್ತಿಗೆದಾರರೊಂದಿಗೆ ಆಡಳಿತರೂಢ ಪಕ್ಷದ ಸದಸ್ಯರು ಪಾಲುದಾರರಾಗಿದ್ದಾರೆ. ಹೆಜಮಾಡಿಯಲ್ಲಿ ಟೋಲ್ ಬಗ್ಗೆ ಪ್ರತಿಭಟನೆ ನಡೆದಾಗ ಆಡಳಿತ ಪಕ್ಷದವರು ಭಾಗವಹಿಸಿದ್ದರು. ಅವರು ಪ್ರತಿಭಟನೆ ನಿಷ್ಕ್ರಿಯಗೊಳಿಸಲು ನಮ್ಮೊಂದಿಗೆ ಕೈ ಜೋಡಿಸಿದ್ದರು. ಈಗ ಟೋಲ್ ಹೋರಾಟವು ತುಳುನಾಡು ವರ್ಸಸ್ ಬಿಜೆಪಿಯಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ. ಅವರು ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ.18ರಂದು ನಡೆಯುವ ಸುರತ್ಕಲ್ ಟೋಲ್ ಮುತ್ತಿಗೆ ಹೋರಾಟದಲ್ಲಿ ಸರ್ವ ಜನರು ಮುತ್ತಿಗೆಯಲ್ಲಿ ಭಾಗವಹಿಸಬೇಕು. ನಾವು ಎಲ್ಲದಕ್ಕೂ ತಯಾರಾಗಿಯೇ ಮುತ್ತಿಗೆ ಹಾಕಲು ಸಿದ್ದತೆ ನಡೆಸಿದ್ದೇವೆ. ಪೋಲಿಸ್ ಇಲಾಖೆ ಯಾವುದನ್ನು ಹತ್ತಿಕ್ಕುತ್ತದೆ ಎಂದು ಗಮನಿಸುತ್ತಿದ್ದೇವೆ. ಪೋಲಿಸರು ಗುತ್ತಿಗೆದಾರರ ಹಿತಾಸಕ್ತಿ ಕಾಯುತ್ತಾರೆಯೋ, ಸಾರ್ವಜನಿಕರ ಹಿತರಕ್ಷಣೆ ಮಾಡುತ್ತಾರೆಯೋ ನೋಡೋಣ ಎಂದರು. ದ.ಕ ಲೋಕಸಭಾ ಸದಸ್ಯ ನಿರಂತರ ಆಶ್ವಾಸನೆ ನೀಡಿ ಟೋಲ್ ಮುಕ್ತಗೊಳಿಸುವಲ್ಲಿ ವಿಫಲರಾಗಿದ್ದಾರೆ. ಟೋಲ್ ಪಾವತಿಸಬೇಡಿ, ನಾನು ಜವಾಬ್ದಾರ ಎಂದು ಹೇಳಿದರೂ, ಅವರಿಂದ ಟೋಲ್ ಸ್ಥಗಿತಗೊಳಿಸುವ ಯಾವ ಕಾರ್ಯವು ಇದುವರೆಗೆ ಆಗಿಲ್ಲ. ಲೋಕೋಪಯೋಗಿ ಇಲಾಖಾ ಮಂತ್ರಿ ಸಿಸಿ ಪಾಟೀಲ್, ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಸುರತ್ಕಲ್ ಟೋಲ್ ಸ್ಥಗಿತಗೊಳಿಸುವ ಬಗ್ಗೆ ಉಲ್ಲೇಖಿಸಿದ್ದಾರೆ, ಆದರೆ ಯಾವುದೇ ಫಲಿತಾಂಶ ಹೊರಬಂದಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲು, ಮುಖಂಡರಾದ ಜಿತೇಂದ್ರ ಫುಟಾರ್ಡೋ, ಕುದಿ ಚರಣ್ ವಿಠ್ಠಲ್ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.