



ಉಡುಪಿ: ಸುರತ್ಕಲ್ ಟೋಲ್ ಗೇಟ್ ತೆರವು ಗೊಳಿಸುವುದಾಗಿ ಭರವಸೆ ನೀಡಿದ ಹೊರತಾಗಿಯೂ ಯಾವುದೇ ಪ್ರಕ್ರಿಯೆ ಆರಂಭಗೊಳ್ಳದ ಕಾರಣ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ತೆರವಿಗಾಗಿ ಅ.18 ರಂದು `ನೇರ ಕಾರ್ಯಾಚರಣೆ ದಿನ'ವಾಗಿ ಆಚರಿಸಿ ಟೋಲ್ ಗೇಟ್ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಅವರು ತಿಳಿಸಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.18 ರಂದು ಬೆಳಿಗ್ಗೆ 9.30 ಕ್ಕೆ ಸುರತ್ಕಲ್ ಟೋಲ್ ಗೇಟ್ ಮುಂಭಾಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನತೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಟೋಲ್ ಗೇಟ್ ನಲ್ಲಿ ನಡೆಯುವ ಸುಂಕ ಸಂಗ್ರಹವನ್ನು ಖಾಯಂ ಆಗಿ ಅಂತ್ಯಹಾಡುವ ನಿರ್ಧಾರ ಕೈ ಗೊಳ್ಳಲಾಗಿದೆ ಎಂದು ತಿಳಿಸಿದರು. ದ.ಕ. ಉಡುಪಿ ಜಿಲ್ಲೆಗಳ ಸಾರಿಗೆ ಯೂನಿಯನ್ ಗಳು, ಬಸ್ಸು, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಗೂಡ್ಸ್ ಲಾರಿ, ಟ್ರಕ್ ಮಾಲೀಕರ ಸಂಘಗಳು, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ ಸೇರಿದಂತೆ ಅಸಂಖ್ಯಾತ ಜನ ಪರ ಸಂಘಟನೆಗಳು, ವಿರೋಧ ಪಕ್ಷಗಳು ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸುಂದರ್ ಮಾಸ್ತರ್, ಕಾಂಗ್ರೆಸ್ ಮುಖಂಡ ಕೀರ್ತಿ ಶೆಟ್ಟಿ, ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಷನ್ ನ ಪ್ರಕಾಶ್ ಅಡಿಗ ಹಾಗೂ ಸಂಜೀವ ಬಳ್ಕೂರು ಇದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.