



ಕಾಪು:ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಕುರಿತಂತೆ ಇನ್ನೋರ್ವ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಬಜ್ಪೆ ನಿವಾಸಿ ಮಹಮ್ಮದ್ ಆಸಿಫ್ (32) ಬಂಧಿತ ಆರೋಪಿ.ಈತನನ್ನು ಜೂ. 22ರಂದು ಗುರುವಾರ ಮುಂಬಯಿನ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಪೊಲೀಸರು ಉಡುಪಿಗೆ ಕರೆತಂದಿದ್ದಾರೆ.
ಕಳೆದ ಜೂನ್ ತಿಂಗಳಿನಲ್ಲಿ ಕರಾವಳಿಯಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದ ಸಂದರ್ಭ ಯಶಪಾಲ್ ಸುವರ್ಣ ಅವರಿಗೆ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಆರೋಪಿಗಳನ್ನು ಬಂಧಿಸುವಂತೆ ಕಾಪು ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಕಾಪು ಠಾಣೆಗೆ ದೂರು ನೀಡಿದ್ದರು.
ಕೊಲೆ ಬೆದರಿಕೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಜ್ಪೆ ಸಮೀಪದ ಕೆಂಜಾರು ನಿವಾಸಿ ಮಹಮ್ಮದ್ ಶಾಫಿ (26)ಯನ್ನು ಕಾಪು ಪೊಲೀಸರು ಈ ಹಿಂದೆಯೇ ಬಂಧಿಸಿದ್ದು,ಆತನ ಬಂಧನವಾಗುತ್ತಿದ್ದಂತೆಯೇ ಆಸಿಫ್ ತಲೆಮರೆಸಿಕೊಂಡಿದ್ದ. ಆತ ಗುರುವಾರ ವಿದೇಶದಿಂದ ಮುಂಬಯಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ಧಾರೆ. ಬಂಧಿತ ಮೊಹಮ್ಮದ್ ಆಸಿಫ್ ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಆಸಿಫ್ ಗೆ ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.