



ಕುಂದಾಪುರ:
ಆ.24ರಂದು ಹಾಲಾಡಿ ಸೇತುವೆ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಕುಂದಾಪುರ ಅಲ್ಬಾಡಿ ಗ್ರಾಮದ ನಿವಾಸಿ 52 ವರ್ಷದ ಸುಬ್ರಾಯ ಆಚಾರ್ಯ ಅವರ ಮೃತದೇಹ ಜಪ್ತಿ ಗ್ರಾಮದ ನಂದಿಕೇಶ್ವರ ದೇವಸ್ಥಾನ ಬಳಿಯ ಕುದ್ರು ಎಂಬಲ್ಲಿ ವಾರಾಹಿ ನದಿಯಲ್ಲಿ ಆ.27ರಂದು ಪತ್ತೆಯಾಗಿದೆ. ಸುಬ್ರಾಯ ಆಚಾರ್ಯ ಆ.24ರಂದು ಅಲ್ಬಾಡಿಯಿಂದ ಹೊರಟು, ತೆಂಕಬೈಲಿನ ಮೂಲ ಮನೆಗೆ ಹೋಗಿದ್ದರು. ಅಲ್ಲಿಂದ ಗ್ಯಾರೇಜ್‌ಗೆ ಹೋಗುವುದಾಗಿ ತಿಳಿಸಿ ಹೋಗಿದ್ದರು. ಬಳಿಕ ಪೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹುಡುಕಾಟ ನಡೆಸಿದಾಗ ಹಾಲಾಡಿ ಸೇತುವೆ ಬಳಿ ಸುಬ್ರಾಯ ಆಚಾರ್ಯರ ಬೈಕ್, ಮೊಬೈಲ್ ಹಾಗೂ ಚಪ್ಪಲಿ ಕಂಡುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆ.27ರಂದು ಸುಬ್ರಾಯ ಆಚಾರ್ಯರ ಮಗ ಪ್ರಸನ್ನ ಅವರಿಗೆ ಪರಿಚಿತರೊಬ್ಬರು ಕರೆ ಮಾಡಿ ವಾರಾಹಿ ನದಿ ಕುದ್ರು ಎಂಬಲ್ಲಿ ವ್ಯಕ್ತಿಯ ಮೃತದೇಹ ತೇಲುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಹೋಗಿ ಪರಿಶೀಲಿಸಿದಾಗ ಮೃತದೇಹವು ಸುಬ್ರಾಯ ಆಚಾರ್ಯ ಅವರದ್ದು ಎಂದು ದೃಡಪಟ್ಟಿದೆ. ಗ್ಯಾರೇಜ್ ವ್ಯವಹಾರದಲ್ಲಿ ಆದ ನಷ್ಟದಿಂದ ಮನನೊಂದ ಸುಬ್ರಾಯ ಆಚಾರ್ಯ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.