



ಕಾರ್ಕಳ: ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ, ಮಹಿಳೆಯರು ಇರುವ ಮನೆಗೆ ಬೆಳ್ಳಂಬೆಳಗ್ಗೆ ಬೆಳಿಗ್ಗೆ 4.30ರ ಸುಮಾರಿಗೆ ಪೊಲೀಸರು ನುಗ್ಗಿ ಯುವತಿಗೆ ಹಲ್ಲೆ ನಡೆಸಿದ ಘಟನೆ ಅತ್ಯಂತ ಖಂಡನೀಯವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಪುರುಷ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವಿನಂತಿಸುತ್ತೇನೆ ಎಂದು ರಮಿತ ಸೂರ್ಯವಂಶಿ ಹೇಳಿದರು.
ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿಯ ಚಿಕ್ಕಮ್ಮನ ಮನೆಗೆ ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದೇ ಕೇವಲ ಪುರುಷ ಪೊಲೀಸ್ ಸಿಬ್ಬಂದಿಯೇ ನುಗ್ಗಿ, ಅಕ್ಷತಾ ಪೂಜಾರಿ ಎಂಬ ಮುಗ್ಧ ಯುವತಿಗೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪವಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಠಾಣಾಧಿಕಾರಿಗಳು ಪ್ರಕರಣವನ್ನು ದಾಖಲಿಸದೇ, ಸಂಬಂಧಿಸಿದ ಪೊಲೀಸರನ್ನು ರಕ್ಷಿಸುವ ಉದ್ದೇಶದಿಂದ ಅಕ್ಷತಾ ಪೂಜಾರಿ ಹಾಗೂ ಆಕೆಯ ತಾಯಿಯ ಮೇಲೆ ‘ಕರ್ತವ್ಯಕ್ಕೆ ಅಡ್ಡಿ’ ಎಂಬ ಸುಳ್ಳು ಪ್ರಕರಣ ದಾಖಲಿಸಿರುವುದು ಎಷ್ಟು ನ್ಯಾಯಸಮ್ಮತ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಯುವತಿಗೆ ನ್ಯಾಯ ಒದಗಿಸಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ಮಹಿಳೆಯರ ರಕ್ಷಣೆಗೆ ನೇಮಿಸಲಾದ ಪೊಲೀಸ್ ಇಲಾಖೆ, ರಕ್ಷಕರಾಗಿ ನಡೆದುಕೊಳ್ಳಬೇಕಿದೆ. ಇಲಾಖೆಯ ಮೇಲಿರುವ ಜನರ ನಂಬಿಕೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಅಕ್ಷತಾ ಪೂಜಾರಿ ಅವರ ನ್ಯಾಯಕ್ಕಾಗಿ ಇಡೀ ಹಿಂದೂ ಸಮಾಜ ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ ಎಂದು ರಮಿತ ಸೂರ್ಯವಂಶಿ ಆಗ್ರಹಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.