



ಕಾರ್ಕಳ: ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ತನ್ನ ಕ್ಷೇತ್ರ ಕಾರ್ಕಳದ ಪ್ರವಾಸಿ ತಾಣಗಳನ್ನು, ಸಂಸ್ಕೃತಿ ಕಲೆಗಳನ್ನು ನಾಡಿಗೆ ಪರಿಚಯಿಸುವ, ನಾಡಿನ ಸಂಸ್ಕೃತಿ ಕಲೆಗಳನ್ನು ಕ್ಷೇತ್ರದ ಜನತೆಗೆ ಪರಿಚಯಿಸುವ ಪರಿಕಲ್ಪನೆಯೊಂದಿಗೆ ಮಾ.೧೦ ರಿಂದ ೨೦ರವರೆಗೆ ಹಮ್ಮಿಕೊಂಡಿರುವ ಕಾರ್ಕಳ ಉತ್ಸವ ಹಲವಾರು ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ. ಉತ್ಸವಕ್ಕೆ ಈಗಾಗಲೇ ಭರದಿಂದ ತಯಾರಿಗಳು ನಡೆಯುತಿದ್ದು, ಅದರಂಗವಾಗಿ ಇಂದು (ಮಾ.6) ಉತ್ಸವ ಸ್ವಚ್ಛತೆ ಎಂಬ ಕಾರ್ಯಕ್ರಮ ಬೆಳಗ್ಗೆ 7ರಿಂದ ಅಪರಾಹ್ನ ೨ವರೆಗೆ ನಡೆಯಲಿದೆ. ನಮ್ಮ ಸಂಸ್ಕೃತಿಯ ಭಾಗವೇ ಸ್ವಚ್ಚತೆ ಎಂಬ ಹಿನ್ನೆಲೆಯಲ್ಲಿ ಕಾರ್ಕಳ ಉತ್ಸವದ ಮುನ್ನ ತಾಲೂಕಿನ ಸ್ವಚ್ಚತೆ ಹೆಚ್ಚಿಸುವುದನ್ನು ಒಂದು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಸಚಿವರು ಕರೆ ನೀಡಿದ್ದಾರೆ. ಅದರಂತೆ ಇಂದು ತಾಲೂಕಿನ ಹಳ್ಳಿಹಳ್ಳಿಗಳಿಂದ 5000ಕ್ಕೂ ಹೆಚ್ಚು ಕರಸೇವಕರು, 2000ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು, ಪುರಸಭೆ ಸಿಬ್ಬಂದಿಗಳು ಕಾರ್ಕಳ ನಗರವನ್ನು ಎಲ್ಲಾ ರೀತಿಯಲ್ಲಿ ಸ್ವಚ್ಚಗೊಳಿಸುವ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಕಾರ್ಕಳ ಉತ್ಸವದ 10 ದಿನಗಳಲ್ಲಿ ನಗರದಲ್ಲಿ ಎಲ್ಲಿಯೂ ಕಸ ಕಾಣದಂತೆ ನಿಗಾ ವಹಿಸಲು ಸ್ವಚ್ಚಾತಾ ರಾಯಭಾರಿಗಳನ್ನು ನೇಮಕ ಮಾಡಲಾಗಿದೆ. ಕಸ ಚೆಲ್ಲುವವರ ಮೇಲೆಯೂ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯರಸ್ತೆಗಳನ್ನು ಸ್ವಚ್ಚ ಮಾಡಲಾಗುತಿದ್ದು, ಡಿವೈಡರ್ ಗಳನ್ನು ಸುಣ್ಣಬಣ್ಣ ಬಳಿಯಲಾಗುತ್ತಿದೆ. ನಗರದ ಪ್ರಾಚೀನ ಕಟ್ಟಡಗಳಿಗೆ ಶಕ್ತಿ ತುಂಬಲಾಗುತ್ತಿದೆ. ಕಾರ್ಕಳ ಪುರ ಪ್ರವೇಶಿಸುವ ಜೋಡುರಸ್ತೆಯಿಂದ ತೆಳ್ಳಾರು ಸೇತುವೆ, ಕಾರ್ಕಳ ಬೈಪಾಸ್ ನಿಂದ ಬಂಗ್ಲೆಗುಡ್ಡೆ ಜಂಕ್ಷನ್ ವರೆಗಿನ ರಸ್ತೆ ಬದಿಗಳಲ್ಲಿ ಈಗಾಗಲೇ ಭಿತ್ತಿಚಿತ್ರಗಳನ್ನು ರಚಿಸಲಾಗಿದ್ದು, ಉತ್ಸವಕ್ಕೆ ಜನರನ್ನು ಸ್ವಾಗತಿಸುತ್ತಿವೆ.
....... ಕಾರ್ಕಳ ಉತ್ಸವ ಜನರ ಹಬ್ಬವಾಗಿದೆ. ಅದರ ಹಿನ್ನೆಲೆಯಲ್ಲಿ ಜನರನ್ನು ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಸ್ವಚ್ಛತಾ ಉತ್ಸವವನ್ನು ಆಚರಿಸಲಾಗುತ್ತಿದೆ. ಇದು ಕೇವಲ ಒಂದು ದಿನಕ್ಕೆಸೀಮಿತವಾಗಬಾರದು, ಕಾರ್ಕಳ ಉತ್ಸವದುದ್ದಕ್ಕೂ ನಡೆಯಬೇಕು,
ಉತ್ಸವ ಮುಗಿದ ಮೇಲೂ, ನಗರದಲ್ಲಿ ಮಾತ್ರವಲ್ಲ ಸ್ವಯಂಜೀವನದಲ್ಲಿಯೂ ಸ್ವಚ್ಛತೆ ಕಾಪಾಡುವುದಕ್ಕೆ ಜನರಲ್ಲಿ ಸ್ವಯಂಜಾಗ್ರತಿ ಮೂಡಿಸುವಂತಾಬೇಕು ಎನ್ನುವ ಉದ್ದೇಶದಿಂದ ಈ ಸ್ವಚ್ಛತಾ ಉತ್ಸವನನ್ನು ನಡೆಸಲಾಗುತ್ತಿದೆ.
- ವಿ.ಸುನಿಲ್ ಕುಮಾರ್, ಕಾರ್ಕಳ ಶಾಸಕರು
ಮತ್ತು ರಾಜ್ಯ ಕನ್ನಡ - ಸಂಸ್ಕೃತಿ ಸಚಿವರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.