



ಕಾರ್ಕಳ : ಕನ್ನಡ ಕಟ್ಟುವ ಪ್ರಕ್ರಿಯೆ ಕೇವಲ ಆರಂಭದಲ್ಲಿದ್ದರೆ ಮಾತ್ರ ಸಾಲದು, ಬದಲು ಮುಂದುವರಿಕೆಯಲ್ಲೂ, ಸೂರ್ಯಚಂದ್ರರಿರುವವರೆಗೂ ನಡೆಯಬೇಕಾದುದು ಅನಿವಾರ್ಯ ಎಂದು ಮೂಡಬದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು.
ಶ್ರೀಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ನಮ ತುಳುವೆರ್ ಕಲಾ ಸಂಘಟನೆ, ನಾಟ್ಕದೂರು, ಮುದ್ರಾಡಿ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕನ್ನಡ ಕಾಯಕ ವರ್ಷದ ಪ್ರಯುಕ್ತ ಅಯೋಜಿಸಿದ ’ತುಳುನಾಡಿನ ನೆಲದಲ್ಲಿ ಕನ್ನಡ ವೃಕ್ಷದ ಬೇರು-ಚಿಗುರುಗಳು’ ಎಂಬ ಕುರಿತು ರಾಜ್ಯಮಟ್ಟದ ವಿಚಾರಗೋಷ್ಠಿಯನ್ನು ಶನಿವಾರ ಉದ್ಘಾಟಿಸಿ
ಮಾತನಾಡಿದ ಅವರು ಎರಡು ಸಾವಿರ ವರುಷ ಇತಿಹಾಸವಿರುವ ಕನ್ನಡ ಭಾಷೆಗೆ ಇಂದು ಸೋಲಿನ ಅನುಭವವಾಗದಂತೆ ನಾವೆಲ್ಲರೂ ಕಟಿಬದ್ಧರಾಗಿ ದುಡಿಯಬೇಕು. ಭಾಷೆಯಲ್ಲೂ ಸ್ಪರ್ಧಾತ್ಮಕತೆ ಬಂದಿರುವುದು ವಿಷಾದದ ಸಂಗತಿ. ನಮ್ಮಲ್ಲಿ ಸಂಪತ್ತಾಗಿ ಇಂಗ್ಲೀಷ್ ಆಕ್ರಮಿಸಿಕೊಳ್ಳುತ್ತಿದೆ. ನೆಲದ ಭಾಷೆಗೂ ಅಪಾರ ಪ್ರೀತಿಯನ್ನು ತೋರಬೇಕಾದುದು ನಮ್ಮ ಆದ್ಯ ಕರ್ತವ್ಯ ಎಂದರು.
ಮುಖ್ಯಅತಿಥಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮಾಧವ ಮೂಡುಕೋಣಾಜೆ ಮಾತನಾಡಿ ಕನ್ನಡದ ಕುರಿತು ಯಾವತ್ತೂ ಕೀಳರಿಮೆ ಸಲ್ಲದು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಎ. ಶಿವಾನಂದ ಪೈ ಮಾತನಾಡಿ ಇಂತಹ ಭಾಷಾ ವಿಚಾರಗಳು ಮನೋವಿಕಾಸಕ್ಕೆ ಕಾರಣವಾಗುತ್ತವೆ. ನಾವೆಲ್ಲರೂ ಇಂತಹ ಕಾರ್ಯಕ್ರಮಗಳನ್ನು ತುಂಬಾ ಆಸ್ಥೆಯಿಂದ ಅನುಸರಿಸುವಂತಾಗಬೇಕು ಎಂದರು
ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಕಾಲೇಜಿನ ಸಂಪನ್ಮೂಲತೆ ಮತ್ತು ಅದರ ಕೊಡುಗೆಯನ್ನು ಸ್ಮರಿಸಿದರು.
ನಮ ತುಳುವೆರ್ ಕಲಾ ಸಂಘಟನೆಯ ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ ಜಾಲ ಸಂಸ್ಥೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು
ಕಾರ್ಯಕ್ರಮದ ಸಂಚಾಲಕ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಸ್ವಾಗತಿಸಿ ಪ್ರಸ್ತಾಪಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುಕುಮಾರ ಮುದ್ರಾಡಿ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.